ಪಂಚಾಂಗ --
ಆಯಾ ದಿವಸದಲ್ಲಿ ನಡೆಯುವ ನಕ್ಷತ್ರ, ತಿಥಿ, ಕರಣ, ಯೋಗ ಮತ್ತು ವಾರ ಎಂಬ ಐದು ಅಂಗಗಳನ್ನು ನಿರ್ಣಯಿಸಿ ತಿಳಿಸುವ ಶಾಸ್ತ್ರ ಕಾಲಗಣನಾಶಾಸ್ತ್ರ ಎಂಬ ಸಾಮಾನ್ಯವಾದ ಅರ್ಥವೂ ಇದೆ.

	ನಕ್ಷತ್ರ : ಐದು ಅಂಗಗಳ ಪೈಕಿ ನಕ್ಷತ್ರದಿಂದ ದಿವಸವನ್ನು ಗುರುತಿಸುವುದು ಅತಿ ಪುರಾತನ ಮತ್ತು ಆರ್ಷೇಯ ಮಾರ್ಗ. ನಕ್ಷತ್ರಮಂಡಲದಲ್ಲಿ ಚಂದ್ರಸ್ಥಾನ ಗಂಟೆ ಗಂಟೆಗೂ ಬದಲಾಯಿಸುತ್ತ ಇರುವುದೆಂಬುದು ಸ್ಥೂಲವೀಕ್ಷಣೆಗೆ ಕೂಡ ಪತ್ತೆ ಆಗುತ್ತದೆ. ಒಂದು ರಾತ್ರಿ ಚಂದ್ರ ಯಾವ ನಕ್ಷತ್ರದ ಸಮೀಪದಲ್ಲಿ ಇದೆ ಎಂದು ಗುರುತು ಇಟ್ಟುಕೊಂಡಿದ್ದು ಅದೇ ನಕ್ಷತ್ರದ ಸನಿಹಕ್ಕೆ ಮತ್ತೆ ಚಂದ್ರ ಎಂದು ಬರುವುದು ಎಂಬುದನ್ನು ಗಮನಿಸಬೇಕು. ಇದಕ್ಕೆ ತಾಗುವ ಕಾಲಾವಧಿ ಸುಮಾರು 27 (ನಿಷ್ಕøಷ್ಟವಾಗಿ 27,32166) ದಿವಸಗಳೆಂದು ಪುರಾತನ ಭಾರತೀಯ ಖಗೋಳಜ್ಞರು ನಿರ್ಣಯಿಸಿದ್ದರು. ಆದ್ದರಿಂದ ಅವರು ನಕ್ಷತ್ರ ಮಂಡಲದಲ್ಲಿಯ ಚಾಂದ್ರಕಕ್ಷೆಯನ್ನು (ವೃತ್ತ) ಇಪ್ಪತ್ತೇಳು ಸಮಭಾಗಗಳಾಗಿ ವಿಭಾಗಿಸಿ ಆಯಾ ಭಾಗದಲ್ಲಿ ಪ್ರಕಾಶಿಸುವ ಕಾಂತಿಯುತ ನಕ್ಷತ್ರಗಳ ಯೋಗ ತಾರೆಗಳ ಹೆಸರುಗಳಾದ ಕೃತ್ತಿಕಾ, ರೋಹಿಣಿ, ಮೃಗಶಿರಾ ಮೊದಲಾಗಿ ಅಶ್ವಿನೀ, ಭರಣಿಗಳ ವರೆಗಿನ ಇಪ್ಪತ್ತೇಳು ಹೆಸರುಗಳನ್ನು ಆ ನಕ್ಷತ್ರ ಪ್ರಾಂತಗಳಿಗಿಟ್ಟರು. ಯಾವ ನಕ್ಷತ್ರ ಪ್ರಾಂತದಲ್ಲಿ ಯಾವ ದಿವಸ ಚಂದ್ರ ಇರುವುದೋ ಆ ನಕ್ಷತ್ರ ಅಂದಿನ ನಕ್ಷತ್ರವೆಂದೆನ್ನಿಸಿತು. (ಅಂದಹಾಗೆ ಅಶ್ವಿನಿ, ಭರಣಿ, . . . .ರೇವತಿ ವರೆಗಿನ ಇಪ್ಪತ್ತೇಳು ನಕ್ಷತ್ರಗಳು ಆಕಾಶದಲ್ಲಿ ಪಶ್ಚಿಮ-ಪೂರ್ವ ದಿಶೆಯಲ್ಲಿ ಗುರುತಿಸಲ್ಪಟ್ಟಿವೆ. ಎಂದೇ ಆಕಾಶಕಾಯಗಳ ದೈನಂದಿನ ಏಕದಿಶಾ ಚಲನೆಯಲ್ಲಿ ಅಶ್ವಿನಿ ಮೊದಲು ಮೂಡಿ ಮೊದಲು ಕಂತುತ್ತದೆ, ಭರಣಿ ಇದರ ಬೆನ್ನಿಗೆ ಇತ್ಯಾದಿ).

	ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ನಕ್ಷತ್ರಗಳನ್ನು ಕೃತ್ತಿಕೆಯಿಂದ ಎಣಿಸುತ್ತಿದ್ದರು. ಅಂದರೆ ಆಗ ಕೃತ್ತಿಕೆ ಮೂಲಬಿಂದುವಾಗಿತ್ತು. ಅದರ ಕ್ರಿ.ಶ. ಆರನೆಯ ಶತಮಾನದಲ್ಲಿ ಮೂಲಬಿಂದುವನ್ನು ಅಶ್ವಿನಿಗೆ ಹಿಂದೆಳೆಯಲಾಯಿತು. ಅಲ್ಲದೆ ಇಪ್ಪತ್ತೇಳು ನಕ್ಷತ್ರಗಳ ವಲಯಗಳನ್ನು ಸಮಕೋನೀಯ ಕಂಸಗಳಾಗಿ ಅಥವಾ ಪ್ರಾಂತಗಳಾಗಿ ವಿಭಾಗಿಸಲಾಯಿತು. ಆಗ ಒಂದೊಂದು ಪ್ರಾಂತದ ವ್ಯಾಪ್ತಿ 360ಲಿ ( 27 ಅಂದರೆ 13 1/3ಲಿ ಎಂದು ನಿರ್ಣೀತವಾಯಿತು. ಉದಾಹರಣೆಗೆ ಮೂರನೆಯ ನಕ್ಷತ್ರವಾದ ಕೃತ್ತಿಕಾ ಪ್ರಾಂತವೆಂದರೆ ಭಾರತೀಯ ಖಗೋಳೀಯ ರೇಖಾಂಶ 26 2/3ಲಿ ಯಿಂದ 40ಲಿ ಯ ವರೆಗಿನದು. ಅಶ್ವಿನಾದಿ ಬಿಂದುವಿನ (ಭಾರತೀಯ ರೇಖಾಂಶ 0ಲಿ ಯ) ಆಧುನಿಕ ಸಾಯನ ರೇಖಾಂಶ (ಅಯನಾಂಶ) 23ಲಿ 18'(1960ಕ್ಕೆ). ಈ ಆಯನಾಂಶ ವರ್ಷಕ್ಕೆ ಸುಮಾರು 50" ಗಳಂತೆ ಹೆಚ್ಚುತ್ತಿದೆ. ಚಿತ್ತಾಯೋಗ ತಾರೆಯ ರೇಖಾಂಶ ಸರಿಯಾಗಿ 180 ಎಂದು ಸೂರ್ಯಸಿದ್ಧಾಂತದಲ್ಲಿ ಹೇಳಿದೆ.

	ತಿಥಿ : ದಿವಸವನ್ನು ನಕ್ಷತ್ರದಿಂದ ಮಾತ್ರ ಗುರುತಿಸುವುದರಲ್ಲಿ ವ್ಯಾವಹಾರಿಕ ಸೌಕರ್ಯ ಕಡಿಮೆ. ಆದ್ದರಿಂದ ಚಂದ್ರನ ವೃದ್ಧಿಕ್ಷಯಗಳನ್ನು ಸೂಚಿಸುವ ತಿಥಿಗಳಿಂದಲೂ ದಿವಸವನ್ನು ನಿರ್ದೇಶಿಸುವ ಅವಶ್ಯಕತೆ ಪುರಾತನ ಋಷಿಗಳಿಗೆ ಉಂಟಾಯಿತು. ಸೂರ್ಯಚಂದ್ರರು ಒಂದೇ ರೇಖಾಂಶದಲ್ಲಿರುವ ಕ್ಷಣಕ್ಕೆ ಅಮಾವಾಸ್ಯೆ ಎಂದು ಹೆಸರು. ಅವುಗಳ ರೇಖಾಂಶಾಂತರ 180 ಆದಾಗ ಹುಣ್ಣಿಮೆ ಆಗುತ್ತದೆ. ಅಮಾವಾಸ್ಯೆಯಿಂದ ಮುಂದಿನ ಅಮಾವಾಸ್ಯೆಯ ತನಕದ ಕಾಲಾವಧಿಗೆ ಚಾಂದ್ರಮಾಸ ಎಂದು ಹೆಸರು. ಚಾಂದ್ರಮಾಸದ ಅವಧಿ ಸೂರ್ಯಸಿದ್ಧಾಂತದ ಗಣನೆಯಂತೆ 29.530587946 ದಿವಸಗಳು. ಇದು ಆಧುನಿಕ ಗಣನೆಗಿಂತ ಕೇವಲ 0.0000008 ದಿವಸ ಕಡಿಮೆ.

	ನಾಕ್ಷತ್ರಿಕ ಮಾಸದ ಅವಧಿ 27 1/3 ದಿವಸಗಳು. ಈ ಸಂಖ್ಯೆಗೆ ಸಮೀಪದ ಪೂರ್ಣಾಂಕವಾದ 27ರಿಂದ ವೃತ್ತಕೋನವನ್ನು (3600) ಭಾಗಿಸಿ ಒಂದೊಂದು ನಕ್ಷತ್ರದ ಕೋನ ವ್ಯಾಪ್ತಿಯನ್ನು ನಿರ್ಣಯಿಸಿದಂತೆಯೆ ಚಾಂದ್ರಮಾಸದ ಅವಧಿಯಾದ 29.5 ದಿವಸಗಳ ಸಂಖ್ಯೆಗೆ ಸಮೀಪದ ಪೂರ್ಣಾಂಕವಾದ 30ರಿಂದ ವೃತ್ತಕೋನವನ್ನು ಭಾಗಿಸಿ ಒಂದೊಂದು ಅವಧಿಯನ್ನು ತಿಥಿ ಎಂದು ಕರೆದರು. ಅಂದರೆ ಅಮಾವಾಸ್ಯಾಕ್ಷಣದಿಂದ-ಸೂರ್ಯಚಂದ್ರರ ರೇಖಾಂಶೈಕ್ಯ ಕ್ಷಣದಿಂದ-ಆರಂಭವಾಗಿ ಸೂರ್ಯಚಂದ್ರರ ರೇಖಾಂಶಾಂತರ 120 (360 ( 30) ಆಗುವ ತನಕ ಪಾಡ್ಯಮೀ ತಿಥಿ ನಡೆಯುತ್ತದೆ. ಅಲ್ಲಿಂದ ರೇಖಾಂಶಾಂತರ 240 ಆಗುವ ತನಕ ಬಿದಿಗೆ ನಡೆಯುತ್ತದೆ. ಇತ್ಯಾದಿ. ಉದಾಹರಣೆಗೆ ಕೃಷ್ಣ ಪಕ್ಷ ಸಪ್ತಮಿ (22ನೆಯ ತಿಥಿ) ಚಂದ್ರಸೂರ್ಯರ 2520ಯಲ್ಲಿ ಆರಂಭವಾಗಿ ರೇಖಾಂಶಾಂತರ 2640 ಯಲ್ಲಿ ಮುಕ್ತಾಯವಾಗುತ್ತದೆ. ಅಶ್ವಿನಿ ಎಂಬ ಸ್ಥಿರಮೂಲಬಿಂದುವಿನಿಂದ ತೊಡಗಿ ಕ್ರಮಶಃ 131/30 ಅಂತರದಲ್ಲಿ ಹೆಜ್ಜೆ ಇಡುತ್ತ ಹೋದಂತೆ ಇಪ್ಪತ್ತೇಳು ನಕ್ಷತ್ರಗಳ ವೃತ್ತ ಮುಗಿಯುವುದು. ಇಲ್ಲಿ ನಕ್ಷತ್ರಸ್ಥಾನಗಳು, ಹಾದಿಯಲ್ಲಿ ನೆಟ್ಟಿರುವ ಮೈಲುಗಲ್ಲುಗಳಂತೆ, ಸ್ಥಿರವಾಗಿರುವುವು. ತಿಥಿಯ ಅಳತೆ ಹೀಗಲ್ಲ. ಹಿಂದಿನ ಅಮಾವಾಸ್ಯೆ ಘಟಿಸಿದ ಸ್ಥಾನ ಇದರ ಅಂದಿನ ಅಳತೆಗೆ ಮೂಲಬಿಂದುವಾದ್ದರಿಂದ ಅನುಕ್ರಮ ತಿಥಿಗಳೆರಡರ ನಡುವಿನ ಕೋನಾಂತರ ಒಂದೇ ಆದರೂ (120) ಆ ಬಿಂದುಗಳು ಸ್ಥಿರ ಬಿಂದುಗಳಲ್ಲ.

	ಕರಣ : ಅರ್ಧ ತಿಥಿಗೆ ಅಥವಾ ಚಂದ್ರಸೂರ್ಯರ ರೇಖಾಂಶಾಂತರ 60 ಆಗುವ ಅವಧಿಗೆ ಕರಣ ಎಂದು ಹೆಸರು. ಅಲ್ಲಿಗೆ ಒಂದು ಚಾಂದ್ರಮಾಸದಲ್ಲಿ 60 ಕರಣಗಳಿವೆ ಎಂದಾಯಿತು. ಮೊದಲನೆಯ ಕರಣಕ್ಕೆ ಕಿಂಸ್ತುಘ್ನ ಎಂದೂ ಎರಡರಿಂದ ಎಂಟನೆಯ ಕರಣಗಳಿಗೆ ಅನುಕ್ರಮವಾಗಿ ಬವ, ಬಾಲವ, ಕೌಲವ, ತೈತಿಲ, ಗರ, ವಣಿಜ, ವಿಷ್ಟಿ (ಭದ್ರ) ಎಂಬ ಹೆಸರುಗಳೂ ಇವೆ. ಮುಂದೆ ಪ್ರತಿ ಏಳರ ಆವರ್ತಗಳಿಗೆ (9-15, 16-22,. . . . . , 51-57) ಬವದಿಂದ ವಿಷ್ಟಿಯ ವರೆಗಿನ ಏಳು ಹೆಸರುಗಳೇ ಪುನರಾವರ್ತಿಸುವುವು. ಐವತ್ತೆಂಟನೆಯದು ಶಕುನಿ, ಐವತ್ತೊಂಬತ್ತನೆಯದು ನಾಗ ಮತ್ತು ಅರವತ್ತನೆಯದು ಚತುಷ್ಪಾದ, ಶಕುನಿ, ನಾಗ, ಚತುಷ್ಪಾದ, ಕಿಂಸ್ತುಘ್ನಗಳಿಗೆ ಸ್ಥಿರಕರಣಗಳೆಂದು ಹೆಸರು.

	ಯೋಗ : ಸೂರ್ಯಚಂದ್ರರ ರೇಖಾಂಶಾಂತರ ತಿಥಿಯನ್ನು ನಿರ್ಣಯಿಸುವುದಷ್ಟೆ. ಹಾಗೆಯೆ ಸೂರ್ಯಚಂದ್ರರ ರೇಖಾಂಶಗಳ ಮೊತ್ತ ಯೋಗವನ್ನು ನಿರ್ಣಯಿಸುತ್ತದೆ. ಅಶ್ವಿನಿ ಮೂಲಬಿಂದುವಿನಿಂದ ಸೂರ್ಯನ ರೇಖಾಂಶ ಮತ್ತು ಚಂದ್ರನ ರೇಖಾಂಶಗಳ ಮೊತ್ತ 00 ಅಥವಾ 3600 ಆದಾಗ ಮೊದಲನೆಯ ಯೋಗ ಆರಂಭವಾಗುತ್ತದೆ. ಈ ಮೊತ್ತ 13 1/30 ಆದಾಗ ಎರಡನೆಯ ಯೋಗ ಆರಂಭವಾಗುತ್ತದೆ. ಈ ರೀತಿಯಲ್ಲಿ ಒಂದು ಯೋಗಮಾಸದಲ್ಲಿ 27 ಯೋಗಗಳಿವೆ:
1. ವಿಷ್ಕಂಭ  	10 ಗಂಡ  	19 ಪರಿಘ
2. ಪ್ರೀತಿ  	11 ವೃದ್ಧಿ  	20 ಶಿವ
3. ಆಯುಷ್ಮಾನ್ 12 ಧ್ರುವ  	21 ಸಿದ್ಧ
4. ಸೌಭಾಗ್ಯ  	13 ವ್ಯಾಘಾತ 	22 ಸಾಧ್ಯ
5. ಶೋಭನ  	14 ಹರ್ಷಣ 	23 ಶುಭ
6. ಅತಿಗಂಡ  	15 ವಜ್ರ  	24 ಶುಕ್ಲ
7. ಸುಕರ್ಮಾ  16 ಸಿದ್ಧಿ 	25 ಬ್ರಹ್ಮ
8. ಧೃತಿ   	17 ವ್ಯತೀಪಾತ 	26 ಇಂದ್ರ
9. ಶೂಲ  	18 ವರೀಯಾನ್ 27 ವೈಧೃತಿ

ಒಂದು ಯೋಗಮಾಸದ ಅವಧಿ 25.4202 ದಿವಸಗಳು.

	ಖಗೋಳಶಾಸ್ತ್ರದ ದೃಷ್ಟಿಯಿಂದ ಕರಣ ಯೋಗಗಳಿಗೆ ಪ್ರಾಶಸ್ತ್ಯವಿಲ್ಲ. ತಿಥಿ ನಕ್ಷತ್ರಗಳು ತಿಳಿಸದ ಯಾವ ಖಗೋಳಿಯಾಂಶವನ್ನೂ ಅವು ತಿಳಿಸುವುದಿಲ್ಲ. ಆದರೆ ಫಲಜ್ಯೋತಿಶ್ಯಾಸ್ತ್ರದ ದೃಷ್ಟಿಯನ್ನು ಇಟ್ಟುಕೊಂಡು ನಮ್ಮ ಪೂರ್ವಿಕರು ಅವನ್ನು ಪಂಚಾಂಗದ ಎರಡು ಅಂಗಗಳಾಗಿ ಎಣಿಸಿದ್ದಾರೆ.

	ವಾರ : ಈ ತನಕ ಪರ್ಯಾಲೋಚಿಸಿರುವ ನಾಲ್ಕು ಅಂಗಗಳೂ ಸೂರ್ಯಚಂದ್ರರ ಗತಿಗಳಿಂದ ನಿರ್ಣೀತವಾಗಿರುವ ಸಹಜ ಕಾಲಮಾನಗಳು. ಐದನೆಯ ಅಂಗವಾದ ವಾರ ಕೃತಕ ಕಾಲಮಾನ. ಪ್ರತಿ ಏಳು ದಿವಸಗಳಿಗೆ ಒಂದರಂತೆ ಅವಿಚ್ಛಿನ್ನವಾಗಿ ಆವರ್ತವಾಗಿ ಬರುವ ವಾರ ಭಾರತದಲ್ಲಿ ಕ್ರಿ. ಶ. ನಾಲ್ಕನೆಯ ಶತಮಾನಕ್ಕೆ ಮುಂಚೆ ಆಚರಣೆಯಲ್ಲಿರಲಿಲ್ಲ. ಇಲ್ಲಿ ತನಕ ತಿಳಿದುಬಂದಿರುವುದರಲ್ಲಿ ವಾರದ ಉಲ್ಲೇಖವಿರುವ ಪ್ರಾಚೀನತಮ ಶಿಲಾಶಾಸನದ ವರ್ಷ ಕ್ರಿ, ಶ. 484. ವೇದಗಳ ಕಾಲದಲ್ಲಿ ಆರು ದಿವಸಗಳ ವಾರ ಪ್ರಚಾರದಲ್ಲಿತ್ತು. 

	ಕ್ರಿ. ಪೂ. ಏಳನೆಯ ಶತಮಾನದಿಂದ ಕ್ರಿ. ಶ. ಮೂರನೆಯ ಶತಮಾನದ ತನಕ ಪ್ರಬಲರಾಗಿದ್ದ ಕಾಲ್ಡೀಯ ಜ್ಯೋತಿಶ್ಯಾಸ್ತ್ರಜ್ಞರು ಏಳು ದಿವಸಗಳ ವಾರವನ್ನು ಪ್ರಾಯಶಃ ಮೊದಲು ಬಳಕೆಗೆ ತಂದರು. ಅವರ ಎಣಿಕೆಯಂತೆ ಶನಿ, ಗುರು, ಮಂಗಳ, ಸೂರ್ಯ, ಶುಕ್ರ, ಬುಧ ಮತ್ತು ಚಂದ್ರ ಎಂಬ ಏಳು `ಗ್ರಹಗಳು ಮಾನವ ಜನಾಂಗಗಳ ವಿಧಾತರಾಗಿದ್ದುವು. `ಗ್ರಹಗಳ ಈ ಕ್ರಮ ಭೂಮಿಕೇಂದ್ರ ದೃಷ್ಟಿಯಿಂದ ಅವುಗಳ ಅವರೋಹೀ ದೂರಕ್ರಮ. ಕಾಲ್ಡೀಯನರು ದಿವಸವನ್ನು 24 ಗಂಟೆಗಳಾಗಿ ವಿಭಾಗಿಸಿ ಒಂದೊಂದು ಗಂಟೆಗೂ ಒಂದೊಂದು ಗ್ರಹ ಇದೇ ಕ್ರಮದಲ್ಲಿ ಒಂದಾದ ಮೇಲೊಂದು ನಾಯಕನಾಗಿ ಆಳುತ್ತದೆಯೆಂದು ಭಾವಿಸಿದರು.

ಚಿತ್ರ-1

ದಿವಸದ ಮೊದಲ ಗಂಟೆಗೆ ಯಾವ ಗ್ರಹ ನಾಯಕನೋ ಅದೇ ಆ ದಿವಸದ ವಾರನಾಮವಾಗುತ್ತದೆ. ಉದಾಹರಣೆಗೆ ಇಂದು ಮೊದಲನೆಯ ಗಂಟೆಯ ನಾಯಕ ಶನಿಗ್ರಹವಾದರೆ ಇಂದು ಶನಿವಾರ. ಏಳು ಗ್ರಹಗಳಿರುವುದರಿಂದ ಇಂದಿನ 22ನೆಯ ಗಂಟೆಯ ನಾಯಕನೂ ಶನಿಯೇ ಆಗುತ್ತದೆ. 23ನೆಯ ಗಂಟೆಯ ನಾಯಕ ಗುರು, 24ನೆಯದರ ನಾಯಕ ಮಂಗಳ, 25ನೆಯದರ ಅಂದರೆ ಮರುದಿನದ ಮೊದಲನೆಯ ಗಂಟೆಯ ನಾಯಕ ಸೂರ್ಯ. ಆದ್ದರಿಂದ ಶನಿವಾರದ ತರುವಾಯ ಆದಿತ್ಯವಾರ ಬರುವುದು. ಹಾಗೆಯೇ ಅನುಕ್ರಮವಾಗಿ ಸೋಮ, ಮಂಗಳ, ಬುಧ, ಗುರು ಮತ್ತು ಶುಕ್ರವಾರಗಳು ಬರುತ್ತವೆ. ಯೆಹೂದ್ಯರು ವಾರಗಳನ್ನು ಪ್ರಥಮ, ದ್ವಿತೀಯ, ತೃತೀಯ ಇತ್ಯಾದಿ ಸಪ್ತಮ ದಿವಸಗಳೆಂದು ಕರೆಯುತ್ತಾರೆ. ಅವರಿಗೆ ಶನಿವಾರವೇ ಪ್ರಥಮ ದಿವಸ.

	ನಕ್ಷತ್ರ ನಿರ್ಣಯ : ನಾಕ್ಷತ್ರಿಕ ಮಾಸದ ಅವಧಿ 27.32166 ದಿವಸಗಳಾದರೆ ಯಾವುದೇ ನಕ್ಷತ್ರದ ಅವಧಿ 1.012 ದಿವಸಗಳೆಂದಾಯಿತು. ಆದ್ದರಿಂದ ನಕ್ಷತ್ರಾರಂಭದ ಕ್ಷಣ ತಿಳಿದರೆ ಅಲ್ಲಿಂದ ಮುಂದಕ್ಕೆ 1.012 ದಿವಸಗಳನ್ನು ಕ್ರಮಶಃ ಕೂಡಿಸುತ್ತ ಎಲ್ಲ ನಕ್ಷತ್ರನಿರ್ಣಯಗಳನ್ನೂ ಮಾಡಬಹುದು ಎಂದೆನ್ನಿಸಬಹುದು. ಆದರೆ ಪರಿಸ್ಥಿತಿ ಇಷ್ಟು ಸರಳವಲ್ಲ. ಏಕೆಂದರೆ ಚಂದ್ರ ಭೂಮಿಯನ್ನು ಸಮವೇಗದಿಂದ ಕಕ್ಷಿಸುತ್ತಿಲ್ಲ. ಚಂದ್ರಕಕ್ಷೆ ದೀರ್ಘವೃತ್ತಾಕಾರವಾಗಿದೆ. ಆದ್ದರಿಂದ ಚಂದ್ರ ಭೂಮಿಗೆ ಸಮೀಪವಾಗಿರುವಾಗ-ಅಂದರೆ ನೀಚಸ್ಥಾನದಲ್ಲಿರುವಾಗ-ವೇಗವಾಗಿ ಸಾಗುತ್ತದೆ. ಆಗ ನಕ್ಷತ್ರದ ಅವಧಿ ಸರಾಸರಿಗಿಂತ ಕಡಿಮೆ ಆಗುತ್ತದೆ. ಚಂದ್ರ ಭೂಮಿಗೆ ದೂರವಾಗಿರುವಾಗ-ಅಂದರೆ ಉಚ್ಚಸ್ಥಾನದಲ್ಲಿರುವಾಗ-ಮಂದವೇಗದಿಂದ ಸಾಗುತ್ತದೆ. ಆಗ ನಕ್ಷತ್ರದ ಅವಧಿ ಸರಾಸರಿಗಿಂತ ಹೆಚ್ಚಾಗುತ್ತದೆ. ಪಂಚಾಂಗಕರ್ತರು ಪ್ರತಿ ದಿವಸದಲ್ಲಿಯೂ ಚಂದ್ರನ ನೀಚಾಂತರವನ್ನು ಲೆಕ್ಕಕ್ಕೆ ತೆಗೆದುಕೊಂಡು ನಕ್ಷತ್ರಾವಧಿಯನ್ನು ಗಣಿಸಿ ಪ್ರತಿಯೊಂದು ನಕ್ಷತ್ರದ ಅಂತ್ಯಕಾಲವನ್ನೂ ಘಳಿಗೆ (24 ಮಿನಿಟ್) ವಿಘಳಿಗೆಗಳಲ್ಲಿ (24 ಸೆಕೆಂಡು) ತಿಳಿಸುತ್ತಾರೆ.

	ತಿಥಿ ನಿರ್ಣಯ : ತಿಥಿ ನಿರ್ಣಯ ಇನ್ನೂ ತೊಡಕಾದದ್ದು. ಏಕೆಂದರೆ ಚಂದ್ರ ಹೇಗೆ ಭೂಮಿಯನ್ನು ಅಸಮವೇಗದಿಂದ ಪರಿಭ್ರಮಿಸುತ್ತಿದೆಯೋ ಹಾಗೆಯೇ ಭೂಮಿಯೂ ಸೂರ್ಯನನ್ನು ಅಸಮವೇಗದಿಂದ ಪರಿಭ್ರಮಿಸುತ್ತಿದೆ. ಆದ್ದರಿಂದ ಸೂರ್ಯ ಭೂಮಿಯನ್ನು ಅಸಮ ವೇಗದಿಂದ ಪರಿಭ್ರಮಿಸುತ್ತಿರುವಂತೆ ಕಾಣುತ್ತದೆ. ಚಂದ್ರ ಸೂರ್ಯರ ರೇಖಾಂಶಾಂತರವೇ ತಿಥಿಯಾದ್ದರಿಂದ ಚಂದ್ರನ ನೀಚಾಂತರಸ್ಥಾನ, ಸೂರ್ಯನ ನೀಚಾಂತರಸ್ಥಾನ ಎರಡನ್ನೂ ಲೆಕ್ಕಕ್ಕೆ ತೆಗೆದುಕೊಂಡು ಪ್ರತಿಯೊಂದು ತಿಥಿಯ ಅವಧಿಯನ್ನೂ ಗಣಿಸಿ ಪಂಚಾಂಗಕರ್ತರು ಆಯಾ ತಿಥ್ಯಂತರವನ್ನು ನಿರ್ಣಯಿಸಬೇಕಾಗುತ್ತದೆ. ಒಂದು ತಿಥಿಯ ಸರಾಸರಿ ಅವಧಿ 29,53088/30 ಅಂದರೆ 23 ಗಂ.37.5 ಮೀ ಗಳಾದಾಗ್ಯೂ ಒಂದೊಂದು ಸಲ ಒಂದು ತಿಥಿಯ ಅವಧಿ 26 ಗಂ. 47 ಮಿನಿಟುಗಳಿಗೇರಬಹುದು. ಒಂದೊಂದು ಸಲ 19 ಗಂ. 59 ಮಿ.ಗಳಿಗಿಳಿಯಬಹುದು.

	ಅಧಿಕ, ಕ್ಷಯ; ತಿಥಿ, ನಕ್ಷತ್ರಗಳು: ಹೀಗೆ ತಿಥಿ ನಕ್ಷತ್ರಗಳು ದಿವಸದ ಯಾವ ಹೊತ್ತಿನಲ್ಲಿಯಾದರೂ ಆರಂಭವಾಗಬಹುದಾದ್ದರಿಂದ ಬೆಳಿಗ್ಗೆ 10 ಗಂಟೆಯ ತನಕ ಪಂಚಮಿ ಆಗಿದ್ದು ಅನಂತರ ಷಷ್ಠೀ ತಿಥಿ ಹುಟ್ಟಬಹುದು. ವ್ಯಾವಹಾರಿಕವಾಗಿ ಇದರಿಂದ ತುಂಬ ತೊಂದರೆ ಉಂಟಾಗುತ್ತದೆ. ಆದಕಾರಣ ಸೂರ್ಯೋದಯ ಕಾಲದಲ್ಲಿ ಯಾವ ತಿಥಿ, ನಕ್ಷತ್ರಗಳು ನಡೆಯುತ್ತಿವೆಯೋ ಅವೇ ವ್ಯಾವಹಾರಿಕವಾಗಿ ಆ ದಿವಸದ ತಿಥಿ, ನಕ್ಷತ್ರ ಎಂದು ಎಣಿಕೆಯಾಗುತ್ತವೆ. ಇದರಿಂದ ನಮ್ಮ ಪಂಚಾಂಗ ಪದ್ಧತಿಯಲ್ಲಿ ಕೆಲವು ವಿಚಿತ್ರಗಳು ತೋರಿ ಬರುತ್ತವೆ. ಉದಾಹರಣೆಗೆ ಇಂದು ಸೂರ್ಯೋದಯಕ್ಕೆ ಕೆಲವು ವಿಘಳಿಗೆಗಳು ಮುಂಚೆ ಸಪ್ತಮೀ ತಿಥಿ ಹುಟ್ಟಿದರೆ ಇಂದೆಲ್ಲ ಸಪ್ತಮಿಯೆಂದು ವ್ಯವಹಾರ ನಡೆಸುತ್ತೇವೆ. ಆದರೆ ಈ ಸಪ್ತಮೀ ನಾಳೆ ಸೂರ್ಯೋದಯಾನಂತರ ಕೆಲವು ಘಳಿಗೆ ವಿಘಳಿಗೆಗಳಾದ ಮೇಲೆ ಮುಗಿಯುವುದು ಅಸಂಭವವಲ್ಲ. ಆಗ ನಾಳೆ ಎಲ್ಲವೂ ಸಪ್ತಮಿಯೇ ಆಗುವುದು. 

ಚಿತ್ರ-2

ನಮ್ಮ ಸಂಕಲ್ಪದಲ್ಲಿರುವುದು ಇಂದಿನ ಸಪ್ತಮಿಯೇ ನಾಳಿನ ಸಪ್ತಮಿಯೇ ಎಂಬುದನ್ನು ಅಸಂದಿಗ್ಧವಾಗಿ ಸೂಚಿಸಬೇಕಾದರೆ ತಿಥಿಯ ಜೊತೆಯಲ್ಲಿಯೇ ನಕ್ಷತ್ರವನ್ನೋ ವಾರವನ್ನೋ ತಿಳಿಸಬೇಕಾಗುತ್ತದೆ. ಒಂದೇ ತಿಥಿ ಮೂರು ದಿವಸಗಳನ್ನು ಸ್ಪರ್ಶಿಸಬಲ್ಲಂತೆಯೇ ಒಂದೇ ನಕ್ಷತ್ರವೂ ಮೂರು ದಿವಸಗಳನ್ನು ಸ್ಪರ್ಶಿಸುವುದು ಸಾಧ್ಯ. ಇಂಥ ಸಂದರ್ಭಗಳಲ್ಲಿ ಎರಡನೆಯ ದಿವಸದ ತಿಥಿಯನ್ನೋ ನಕ್ಷತ್ರವನ್ನೋ ಆಯಾ ಅಧಿಕ ತಿಥಿ ಅಥವಾ ಅಧಿಕ ನಕ್ಷತ್ರ ಎಂದೂ ಕರೆಯುವುದು ರೂಢಿಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿಯೂ ಆಗಬಹುದು. ಉದಾಹರಣೆಗೆ ಇಂದು ಸೂರ್ಯೋದಯಾನಂತರ ಕೆಲವು ವಿಘಳಿಗೆಗಳಿಗೆ ತದಿಗೆಯ ಅಂತ್ಯವಾದರೆ ಇಂದು ತದಿಗೆಯಾಗುತ್ತದೆ. ಅನಂತರ ಹುಟ್ಟುವ ಚೌತಿ ನಾಳೆ ಸೂರ್ಯೋದಯಕ್ಕೆ ಕೆಲವು ವಿಘಳಿಗೆಗಳು ಮುಂಚೆಯೇ ಮುಗಿಯುವುದು ಸಂಭವ. ಆಗ ನಾಳೆ ಸೂರ್ಯೋದಯ ಕಾಲದಲ್ಲಿ ಪಂಚಮಿ ನಡೆಯುತ್ತಿರುವುದಾದ್ದರಿಂದ ಇಂದು ತದಿಗೆ, ನಾಳೆ ಪಂಚಮಿ ಆಗುತ್ತದೆ; ಚೌತಿ ಕ್ಷಯ ತಿಥಿ ಆಗುತ್ತದೆ. ಹೀಗೆಯೇ ಕ್ಷಯ ನಕ್ಷತ್ರಗಳೂ ಬರುವುದುಂಟು. ಈ ಕಾರಣಗಳಿಂದ ಒಂದು ಪಕ್ಷಕ್ಕೆ 15 ತಿಥಿಗಳಾದರೂ ಒಂದು ಪಕ್ಷದಲ್ಲಿ ಸಾಮಾನ್ಯವಾಗಿ 14 ದಿವಸಗಳು ಅಥವಾ 15 ದಿವಸಗಳು ಬರುವುವೇ ಅಲ್ಲದೆ ಅಪರೂಪವಾಗಿ 13 ದಿವಸ, 16 ದಿವಸಗಳ ಪಕ್ಷಗಳೂ ಸಂಭವಿಸುತ್ತವೆ. ಹಾಗೆಯೇ ಚಾಂದ್ರಮಾಸದ ಸರಾಸರಿ ಅವಧಿ 29 ದಿವಸ 12.73 ಗಂಟೆಗಳಾದರೂ ಕೆಲವು ತಿಂಗಳುಗಳ ಅವಧಿ 29 ದಿವಸ 19.6 ಗಂ ಕೆಲವುಗಳ ಅವಧಿ 29 ದಿವಸ 5.9 ಗಂ ಆಗುವುದು ಸಾಧ್ಯ. ಹೀಗೆ ಭಾರತೀಯರ ನಾಕ್ಷತ್ರಿಕ ಮಾಸನಿರ್ಣಯ, ಚಾಂದ್ರಮಾಸನಿರ್ಣಯ ನೀಚಮಾಸ ನಿರ್ಣಯಗಳು ಸರಾಸರಿಯಲ್ಲಿ ಸಾಕಾದಷ್ಟು ನಿಷ್ಕøಷ್ಟವಾಗಿದ್ದರೂ ದಿನದಿನದ ತಿಥ್ಯಂತರ ಮತ್ತು ನಕ್ಷತ್ರಾಂತ್ಯದ ಗುಣಿತಗಳು ಸರಿಯಾದ ಕ್ಷಣಗಳಿಗಿಂತ ಅನೇಕ ವೇಳೆ ನಾಲ್ಕೈದು ಗಂಟೆಗಳಷ್ಟು ಹೆಚ್ಚು ಕಡಿಮೆ ಆಗಿ ಬರಬಹುದು. ಇದಕ್ಕೆ ಮುಖ್ಯ ಕಾರಣ ಸುಮಾರು ಒಂದು ಸಾವಿರ ವರ್ಷಗಳ ಕೆಳಗೆ ವೀಕ್ಷಣೆಯಿಂದ ನಿರ್ಣಯವಾಗಿದ್ದ ಅಂಕೆ ಅಂಶಗಳನ್ನೂ ಗಣನವಿಧಾನಗಳನ್ನೂ ಇಂದು ಕೂಡ ಅವರು ಅನುಸರಿಸುತ್ತಿರುವುದೇ ಆಗಿದೆ. ಕೆಪ್ಲರನ ಗ್ರಹಚಲನ ನಿಯಮಗಳ ಮತ್ತು ನ್ಯೂಟನ್ನನ ಸಾರ್ವತ್ರಿಕ ಗುರುತ್ವ ನಿಯಮಗಳ ಆವಿಷ್ಕಾರ ಆಗಿರದಿದ್ದ ಆ ಕಾಲದಲ್ಲಿ ಚಂದ್ರಗತಿಯನ್ನು ಗುಣಿಸಿ ನಕ್ಷತ್ರ, ತಿಥಿ ನಿರ್ಣಯಗಳನ್ನು ಹೇಗೆ ಮಾಡುತ್ತಿದ್ದರೆಂಬುದನ್ನು ಚಿತ್ರದಲ್ಲಿ ಸ್ಥೂಲವಾಗಿ ಕಾಣಿಸಿದೆ.

	ವೇದಾಂಗ ಜ್ಯೋತಿಷದ ವರ್ಷ ದಿವಸದ ಐದು ಅಂಗಗಳನ್ನು ನಿರ್ಣಯಿಸಿದ್ದಾದ ಬಳಿಕ ವರ್ಷ ನಿರ್ಣಯವನ್ನು ಮಾಡುವ ಕೆಲಸ ಉಳಿದಿದೆ. ಹನ್ನೆರಡು ಚಾಂದ್ರಮಾಸಗಳಿಗೊಂದೊಂದು ಸಲ ಋತುಧರ್ಮಗಳು-ಬೇಸಗೆ ಕಾಲ, ಸುಗ್ಗಿ ಕಾಲ, ಚಳಿಗಾಲ, ವಸಂತಕಾಲ-ಆವರ್ತವಾಗಿ ಬರುತ್ತವೆಂಬ ಸಂಗತಿಯನ್ನು ಐದು ಸಾವಿರ ವರ್ಷಗಳಷ್ಟು ಹಿಂದೆಯೇ ವೇದರ್ಷಿಗಳು ಕಂಡುಕೊಂಡಿದ್ದರು. ಆದರೆ ಹನ್ನೆರಡು ಅಮಾವಾಸ್ಯೆಗಳಿಗೊಂದರಂತೆ ಎಣಿಕೆಯಾಗುವ ಇಂಥ ಚಾಂದ್ರಮಾನ ವರ್ಷಗಳು ಐದಾರು ಕಳೆಯುವುದರೊಳಗೇ ಚಾಂದ್ರವರ್ಷ ಋತುಧರ್ಮಗಳಿಗೆ ಒಂದೂವರೆ, ಎರಡು ತಿಂಗಳಷ್ಟು ಹಿಂದೆ ಬೀಳುತ್ತದೆಂಬುದೂ ಅವರ ಗಮನಕ್ಕೆ ಬಂದಿತ್ತು. 

	ಕೃಷಿ ವಿದ್ಯೆ, ವ್ಯಾಪಾರ, ಸಾಗಾಣಿಕೆಗಳಿಗೆ ಋತುಗಳನ್ನು ಆಶ್ರಯಿಸುವ ಮತ್ತು ಅನುಸರಿಸುವ ವರ್ಷ ಅತ್ಯವಶ್ಯವಾಗಿ ಬೇಕಾಗುತ್ತದೆ. ಆದರೆ ಋತುಗಳು ಚಂದ್ರಗತಿಯನ್ನು ಅನುಸರಿಸುವುದಿಲ್ಲ ಸೂರ್ಯನ ಗತಿಯನ್ನು ಅನುಸರಿಸುತ್ತವೆ. ಸುಮಾರು ಮೂರು ಮೂರೂವರೆ ಸಾವಿರ ವರ್ಷಗಳ ಹಿಂದಿನ ಭಾರತೀಯರು ಸೂರ್ಯ ಕೃತ್ತಿಕಾ ನಕ್ಷತ್ರದಲ್ಲಿದ್ದಾಗ ವಸಂತಾರಂಭವಾಗುತ್ತದೆಂಬುದನ್ನು ಅಥವಾ ಅದು ಧನಿಷ್ಠಾದಿಯಲ್ಲಿದ್ದಾಗ ಉತ್ತರಾಯನ ಪುಣ್ಯಕಾಲವಾಗುತ್ತದೆಂಬುದನ್ನು ಗಮನಿಸಿದ್ದರು. 62 ಚಾಂದ್ರಮಾಸಗಳಿಗೆ ಅಂದರೆ 1,830 ದಿವಸಗಳಿಗೆ ಸರಿಹೋಗುವ 5 ಸೌರವರ್ಷಗಳ ಚಕ್ರವನ್ನು ಆಗ ಪ್ರಚಾರದಲ್ಲಿದ್ದ ವೇದಾಂಗ ಜ್ಯೋತಿಷ ಬಳಕೆಗೆ ಬಂದಿತ್ತು. ಅಲ್ಲಿಗೆ ಒಂದು ಸೌರವರ್ಷದ ಅವಧಿ ಸರಾಸರಿ 366 ದಿವಸಗಳೆಂದು ವೇದಾಂಗ ಜ್ಯೋತಿಷದ ನಿರ್ಣಯವಾಗಿತ್ತು. ಎಂದಾಗುತ್ತದೆ. ದಿನದ ತಿಥಿ, ನಕ್ಷತ್ರಗಳನ್ನು ನಿರ್ಣಯಿಸುವುದೂ ವೇದಾಂಗ ಜ್ಯೋತಿಷದ ಧ್ಯೇಯವಾಗಿತ್ತು. ಕ್ರಿ.ಪೂ ಹದಿನಾಲ್ಕನೆಯ ಶತಮಾನದಿಂದ ಕ್ರಿ.ಶ ಮೂರನೆಯ ಶತಮಾನದ ತನಕವೂ ಈ ಪದ್ಧತಿಯ ಪಂಚಾಂಗ ಆಚರಣೆಯಲ್ಲಿತ್ತೆಂದು ಕಂಡುಬರುತ್ತದೆ. 

	ಸಿದ್ಧಾಂತಗಳ ಸೌರ ವರ್ಷ : ಆದರೆ ಕಾಲ ಕಳೆದಂತೆ ಸೂರ್ಯ ಧನಿಷ್ಠಾ ನಕ್ಷತ್ರವನ್ನು ಸೇರುವುದಕ್ಕೆ ಮುಂಚೆಯೇ ಉತ್ತರಾಯನ ಪುಣ್ಯಕಾಲ ಸಂಭವಿಸುತ್ತದೆಂಬುದು ಖಗೋಳಜ್ಞರ ಗಮನವನ್ನು ಸೆಳೆಯಿತು. ಹೀಗಾಗಿ ಕ್ರಿ.ಶ. 5ನೆಯ ಶತಮಾನದ ಹೊತ್ತಿಗೆ ಸೂರ್ಯ ಉತ್ತರಾಷಾಡ ಎರಡನೆಯ ಪಾದದಲ್ಲಿ ಕಾಲಿಟ್ಟಾಗ ಉತ್ತರಾಯನ ಪುಣ್ಯಕಾಲವಾಗುತ್ತದೆ; ಅಂದರೆ ಸೂರ್ಯ ಅಶ್ವಿನ್ಯಾದಿಯನ್ನು ಸೇರಿದಾಗ ವಸಂತ ವಿಷುವತ್ಪುಣ್ಯಕಾಲವಾಗುತ್ತದೆ-ಕೃತ್ತಿಕೆಯನ್ನು ಸೇರಿದಾಗ ಅಲ್ಲ-ಎಂಬ ಸಿದ್ಧಾಂತಕ್ಕೆ ಭಾರತೀಯ ಖಗೋಳಜ್ಞರು ಬಂದರು, ಮತ್ತು ಈಗ ಆಚರಣೆಯಲ್ಲಿರುವ ಪಂಚಾಂಗ ಪದ್ಧತಿ ಆರಂಭವಾಯಿತು.

	ನಾಕ್ಷಾತ್ರಿಕ ಮಾಸ ನಿರ್ಣಯಕ್ಕೆ ನಕ್ಷತ್ರ ಮಂಡಲದಲ್ಲಿ ಚಂದ್ರ ಕಕ್ಷೆಯನ್ನು ಗುರುತಿಸುವುದು ಹೇಗೆ ಅವಶ್ಯವೋ ಸೌರವರ್ಷ ನಿರ್ಣಯಕ್ಕೆ ಸೌರಕಕ್ಷೆಯನ್ನು ಅಂದರೆ ಕ್ರಾಂತಿ ವೃತ್ತವನ್ನು ಗುರುತಿಸುವುದು ಕೂಡ ಹಾಗೆ ಅವಶ್ಯ. ಆದರೆ ಸೂರ್ಯ ಆಕಾಶದಲ್ಲಿ ಇದ್ದಾಗ ನಕ್ಷತ್ರಗಳು ಕಾಣುವುದಿಲ್ಲವಾದ್ದರಿಂದ ಕ್ರಾಂತಿವೃತ್ತವನ್ನು ಗುರುತಿಸುವುದು ಅಷ್ಟೊಂದು ಸುಲಭವಲ್ಲ. ಚಂದ್ರಗ್ರಹಣ ಕಾಲದಲ್ಲಿ ಸೂರ್ಯ ಚಂದ್ರನಿಗೆ ಸರಿಯಾಗಿ ಅಭಿಮುಖವಾಗಿರುವುದೆಂದು(1800 ಅಂತರ) ಪೂರ್ವಿಕರಿಗೆ ತಿಳಿದಿತ್ತು. ಇದರಿಂದ ನಕ್ಷತ್ರಮಂಡಲದಲ್ಲಿ ಸೂರ್ಯನ ಸ್ಥಾನವನ್ನು ಗುರುತಿಸುವುದು ಸಾಧ್ಯವಾಯಿತು. ಸಂಪೂರ್ಣ ಸೂರ್ಯಗ್ರಹಣ ಕಾಲಗಳಲ್ಲಂತೂ ಸೂರ್ಯನೊಂದಿಗೇ ನಕ್ಷತ್ರಗಳೂ ಗೋಚರವಾಗುವುದುಂಟು. ಹೀಗೆ ಗ್ರಹಣಗಳ ಸಹಾಯದಿಂದ ಪತ್ತೆ ಹಚ್ಚಿದ್ದರಿಂದಲೇ ಕ್ರಾಂತಿ ವೃತ್ತಕ್ಕೆ ಪಾಶ್ಚಾತ್ಯರು ಎಕ್ಲಿಪ್ಟಿಕ್(ಎಕ್ಲಿಪ್ಸ್ ಎಂದರೆ ಗ್ರಹಣ) ಎಂದು ಹೆಸರಿಟ್ಟಿದ್ದಾರೆ.

	ವರಹಾ ಮಿಹಿರನ ಸೂರ್ಯ ಸಿದ್ಧಾಂತದ ಪ್ರಕಾರ ಸೂರ್ಯ ಕ್ರಾಂತಿವೃತ್ತದ ಅಶ್ವಿನ್ಯಾದಿ ಬಿಂದುವಿನಿಂದ ಹೊರಟ ನಕ್ಷತ್ರಮಂಡಲದಲ್ಲಿ ಒಂದು ಪರಿಭ್ರಮಣೆ ಮಾಡಿ ತಿರುಗಿ ಅಶ್ವಿನ್ಯಾದಿ ಬಿಂದುವನ್ನು ಸೇರುವ ಅವಧಿಗೆ ಒಂದು ಸೌರವರ್ಷವೆಂದು ಹೆಸರು; ಸೌರವರ್ಷದ ಅವಧಿ 365.258.756 ದಿವಸಗಳು. ಆಧುನಿಕ ಗಣನೆಯಂತೆ ನಕ್ಷತ್ರಮಾನ ಸೌರವರ್ಷದ ಸರಿಯಾಗಿ ಅವಧಿ 365.256 362 ದಿವಸಗಳು ಅಂದರೆ ಸಿದ್ಧಾಂತಾವಧಿಗಿಂತ ಮೂರುಕಾಲು ಮಿನಿಟ್ಟು ಕಡಿಮೆ. ಸೂರ್ಯ ಒಂದೊಂದು ನಕ್ಷತ್ರವನ್ನು (13 1/30 ರೇಖಾಂಶ) ಗಮಿಸುವ ಅವಧಿಯಲ್ಲಿ ಆಯಾ ಮಹಾನಕ್ಷತ್ರ ನಡೆಯುತ್ತದೆ. ಒಂದು ಮಹಾನಕ್ಷತ್ರದ (ಮಳೆಯ ನಕ್ಷತ್ರದ) ಸರಾಸರಿ ಅವಧಿ 13.53 ದಿವಸಗಳು. ನಮ್ಮ ಪಂಚಾಂಗಗಳಲ್ಲಿ ಸೂರ್ಯ ಪ್ರತಿಯೊಂದು ನಕ್ಷತ್ರ ಪಾದವನ್ನು (3 1/30 ರೇಖಾಂಶಾಂತರ) ಸೇರುವ ಕ್ಷಣವನ್ನೂ ಗುರುತಿಸಿರುತ್ತದೆ. 

	ದ್ವಾದಶ ರಾಶಿಗಳು : ಸಿದ್ಧಾಂತಗಳ ಕಾಲದಲ್ಲಿಯೇ ಕ್ರಾಂತಿ ವೃತ್ತವನ್ನು 27 ನಕ್ಷತ್ರಗಳಾಗಿ ವಿಭಾಗಿಸಿದುದರ ಜೊತೆಗೆ 12 ರಾಶಿಗಳಾಗಿಯೂ ವಿಭಾಗಿಸುವ ಪದ್ಧತಿ ಆಚರಣೆಗೆ ಬಂದದ್ದು. ಒಂದೊಂದು ರಾಶಿಯ ಅಂತರವೂ 300 ಗಳಾದ್ದರಿಂದ ಎರಡೂಕಾಲು ನಕ್ಷತ್ರಗಳಿಗೆ ಅಥವಾ ಒಂಭತ್ತು ನಕ್ಷತ್ರ ಪಾದಗಳಿಗೆ ಒಂದು ರಾಶಿ ಸಮವಾಗುತ್ತದೆ. ಅಶ್ವಿನಿ, ಭರಣಿ, ಕೃತ್ತಿಕೆಯ ಮೊದಲನೆಯ ಪಾದಕ್ಕೆ ಮೇಷ ರಾಶಿಯೆಂದು ಹೆಸರಿಟ್ಟರು. ಹಾಗೆಯೇ ಮುಂದಿನ ಪ್ರತಿ 9 ನಕ್ಷತ್ರ ಪಾದಗಳಿಗೂ ಅನುಕ್ರಮವಾಗಿ ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನುಸ, ಮಕರ, ಕುಂಭ ಮತ್ತು ಮೀನ ಗಳೆಂದು ನಾಮಕರಣವಾಯಿತು. ಸೂರ್ಯ ಮೇಷರಾಶಿಯಲ್ಲಿ ಚಲಿಸುತ್ತಿರುವ ಕಾಲಕ್ಕೆ ಮೇಷ ಮಾಸ, ವೃಷಭ ರಾಶಿಯಲ್ಲಿ ಚಲಿಸುತ್ತಿರುವ ಕಾಲಕ್ಕೆ ವೃಷಭ ಮಾಸ ಇತ್ಯಾದಿಗಳಿಗೆ ಸೌರಮಾಸಗಳ ಹೆಸರುಗಳು ಹುಟ್ಟಿಕೊಂಡುವು. ಒಂದು ಸೌರಮಾಸದ ಸರಾಸರಿ ಅವಧಿ 30.44 ದಿವಸಗಳು. ದ್ವಾದಶ ರಾಶಿಗಳು ಹೆಸರುಗಳ ಈಜಿಪ್ಟಿನಿಂದ ಗ್ರೀಸ್ ಮಾರ್ಗವಾಗಿ ಭಾರತಕ್ಕೆ ಬಂದವು.

ಭೂಮಿಯನ್ನು ಪರಿಭ್ರಮಿಸುವ ಚಂದ್ರನ ಕಕ್ಷಾವೇಗದಂತೆಯೇ ಸೂರ್ಯನನ್ನು ಪರಿಭ್ರಮಿಸುವ ಭೂಮಿಯ ಕಕ್ಷಾವೇಗವು ಅಸಮ. ಭೂಮಿ ಸೂರ್ಯನಿಗೆ ಸಮೀಪದಲ್ಲಿರುವಾಗ (ಪುರಭೂಮಿ ಕಾಲ, ಜನವರಿ 3) ಭೂಮಿಯ ಕಕ್ಷಾವೇಗ ಗರಷ್ಠ, ಆದ್ದರಿಂದ ಆಗ ಸೂರ್ಯ 300 ಗಳನ್ನು ಸರಾಸರಿ ಅವಧಿಗಿಂತ ಬೇಗನೆ ಸುತ್ತುವಂತೆ ಕಾಣುತ್ತದೆ. ಆ ಕಾಲಕ್ಕೆ ಸರಿಯಾದ ಧನುರ್ಮಾಸದ ಅವಧಿ ಸೂರ್ಯ ಸಿದ್ಧಾಂತದ 4 ದತೆ, 29 ದಿ, 7 ಗಂ. 38 ಮಿಗಳು. ಆಧುನಿಕ ಗಣತಿಯಂತೆ 29 ದಿನ 10ಗಂ, ಜು ಮಿಗಳಾಗಬೇಕು. ಭೂಮಿ ಸೂರ್ಯನಿಂದ ದೂರದಲ್ಲಿರುವಾಗ (ಅಪರವಿಕಾಲ, 00ಲೈ 3) ಭೂಮಿಯ ಕಕ್ಷಾವೇಗ ಕನಿಷ್ಠ ಆ ಕಾಲದಲ್ಲಿ ನಡೆಯುವ ಮಿಥುನ ಮಾಸದ ಅವಧಿ 31 ದಿನ, 15 ಗಂ, 28 ಮಿ. ಆಧುನಿಕ ಗಣತಿಯಂತೆ 31 ದಿನ, 10 ಗಂ, 53 ಮಿಗಳು. 

ವ್ಯಾವಹಾರಿಕ ಸಂಕ್ರಮಣಾದಿ : ವ್ಯಾವಹಾರಿಕವಾಗಿ ಸೌರಮಾಸಗಳ ಮೊದಲನೆಯ ದಿವಸವನ್ನು ಎಣಿಸುವ ಸಂಪ್ರದಾಯ ಭಾರತದಲ್ಲೆಲ್ಲ ಏಕರೀತಿಯಾಗಿಲ್ಲ. ತಮಿಳುನಾಡಿನಲ್ಲಿ ಸೂರ್ಯಾಸ್ತಕ್ಕೆ ಮುಂಚೆ ಸಂಕ್ರಮಣ (ಸೌರಮಾಸಾದಿ) ಕ್ಷಣ ಘಟಿಸಿದರೆ, ಮಾರನೆಯ ದಿವಸ ಆ ಮಾಸದ ಮೊದಲನೆಯ ತೇದಿಯೆಂದೂ ಸೂರ್ಯಾಸ್ತನಂತರ ಘಟಿಸಿದರೆ ಮಾರನೆಯ ದಿವಸ ಆ ಮಾಸದ ಮೊದಲನೆಯ ತೇದಿಯೆಂದೂ ಗಣನೆಯಾಗುತ್ತವೆ. ಒರಿಸ್ಸಾದಲ್ಲಿ ಸಂಕ್ರಮಣ ಕ್ಷಣ ಸೂರ್ಯೋದಯದಿಂದ ಮುಂದಿನ ಸೂರ್ಯೋದಯದ ತನಕ ಯಾವಾಗ ಘಟಿಸಿದರೂ ಅಂದೇ ಆ ಸೌರಮಾಸದ ಮೊದಲನೆಯ ದಿವಸ. 
ಬಂಗಾಳದ ಸಂಪ್ರದಾಯ ಬಹಳ ತೊಡಕಿನದು. ಸೂರ್ಯೋದಯದಿಂದ ಅಂದಿನ ಮಧ್ಯರಾತ್ರಿಯತನಕ ಯಾವಾಗ ಸಂಕ್ರಮಣ ಘಟಿಸಿದರು ಅದರ ಮಾರನೆಯ ದಿವಸ ಮಾಸಾದಿ; ಮಧ್ಯರಾತ್ರಿಯಾದ ಬಳಿಕ ಘಟಿಸಿದರೆ ಸೂರ್ಯೋದಯಾನಂತರ ಮಾರನೆಯ ಸೂರ್ಯೋದಯದಿಂದ ಮಾಸಾದಿ ಆಗುತ್ತದೆ. ಇದು ಸಾಮಾನ್ಯ ನಿಯಮ. ಆದರೆ ಮಧ್ಯರಾತ್ರಿಗೆ ಒಂದು ಗಳಿಗೆಯ ಮುಂಚಿನಿಂದ ಮಧ್ಯರಾತ್ರಿಯಾದ ಒಂದು ಗಳಿಗೆಯೊಳಗೆ ಸಂಕ್ರಮಣ ಕ್ಷಣ ಘಟಿಸಿದರೆ, ಹಿಂದಿನ ಸೂರ್ಯೋದಯದಲ್ಲಿ ನಡೆಯುತ್ತಿದ್ದ ತಿಥಿಯನ್ನು ಪರಿಶೀಲಿಸಬೇಕಾಗುತ್ತದೆ. ಆ ತಿಥಿಯೇ ಸಂಕ್ರಮಣ ಕಾಲದಲ್ಲಿಯೂ ನಡೆಯುತ್ತಿದ್ದರೆ ಮಾಸಾದಿ ಸೂರ್ಯೋದಯದಿಂದ ಎಣಿಕೆಯಾಗುತ್ತದೆ. ಆ ತಿಥಿ ಸಂಕ್ರಮಣ ಕ್ಷಣಕ್ಕಿಂತ ಮುಂದೆ ಅಂತ್ಯವಾಗಿದ್ದರೆ, ಮಾಸಾದಿ ಸೂರ್ಯೋದಯಾನಂತರದ ಮಾರನೆಯ ಸೂರ್ಯೋದಯದಿಂದ ಎಣಿಕೆಯಾಗುತ್ತದೆ. ಕಟಕ, ಮಕರ, ಸಂಕ್ರಾಂತಿಗಳೂ ಮಾತ್ರ ಈ ತಿಥಿ ನಿಯಮಕ್ಕೆ ಒಳಪಟ್ಟಿಲ್ಲ. ಕಟಕ ಸಂಕ್ರಮಣ ಮಧ್ಯರಾತ್ರಿಯ ಅಕ್ಕಪಕ್ಕದ ಘಳಿಗೆಯೊಳಗೆ ಘಟಿಸಿದರೆ ಕಟಕಮಾಸಾದಿ ಸೂರ್ಯೋದಯದಿಂದಲೇ ಎಣಿಕೆಯಾಗುತ್ತದೆ. ಮಕರ ಸಂಕ್ರಮಣ ಮಧ್ಯರಾತ್ರಿಯ ಅಕ್ಕಪಕ್ಕದ ಘಳಿಗೆಗಳೊಳಗೆ ಸಂಭವಿಸಿದರೆ ಮಕರಾದಿ ಸೂರ್ಯೋದಯಾನಂತರದ ಮಾರನೆಯ ಸೂರ್ಯೋದಯದಿಂದ ಎಣಿಕೆಯಾಗುತ್ತದೆ. 

ಕೇರಳ ಸಂಪ್ರದಾಯದಂತೆ ಸಂಕ್ರಮಣ ಕ್ಷಣ ಸೂರ್ಯೋದಯದಿಂದ ಅಂದಿನ ಅಹರ್ಭಾಗದ 3/5 ಭಾಗದೊಳಗೆ (ಹೆಚ್ಚುಕಡಿಮೆ ಅಪರಾಹ್ನ 1ಗಂಟೆ 12 ಮಿ ಒಳಗೆ) ಘಟಿಸಿದರೆ ಅಂದೇ ಸೌರಮಾಸಾದಿ, ಆ ಬಳಿಕವಾದರೆ ಮಾರನೆಯ ದಿವಸ ಸೌರಮಾಸಾದಿ ಆಗುತ್ತದೆ. ಈ ವಿವಿಧ ಸಂಪ್ರದಾಯಗಳ ಪರಿಣಾಮವಾಗಿ ಭಾರತದ ವಿವಿಧ ಪ್ರಾಂತಗಳ ಸಂಕ್ರಮಣಾಚರಣೆಗಳಲ್ಲಿ ಒಂದೆರಡು ದಿವಸಗಳ ವ್ಯತ್ಯಾಸ ಅನೇಕ ವೇಳೆ ಕಂಡುಬರಬಹುದು. 

ಸೂರ್ಯಸಿದ್ಧಾಂತ ಹೀಗೆ ಸೌರ ಪಂಚಾಂಗಕ್ಕೆ ಶಾಸ್ತ್ರೀಯ ತಳಹದಿಯನ್ನು ಹಾಕಿಕೊಟ್ಟಿದ್ದರೂ, ವ್ಯವಸಾಯೋದ್ಯಮಗಳಿಗೆ ಸೌರವರ್ಷವೇ ಅಧಿಕ ಪ್ರಯೋಜನಕಾರಿ. ಸೂರ್ಯನ ಗತಿ ನಿರ್ಣಯ ಚಂದ್ರನ ಗತಿ ನಿರ್ಣಯಕ್ಕಿಂತ ಹೆಚ್ಚು ಸರಳವಾದದ್ದು, ಇವೆಲ್ಲ್ಲ ನಿಜವಾಗಿದ್ದರೂ ಭಾರತದ ಬಹು ಭಾಗದ ಜನ ಶುದ್ಧ ಸೌರವರ್ಷವನ್ನು ಒಪ್ಪಿಕೊಳ್ಳಲು ಇಷ್ಟಪಡಲಿಲ್ಲ. ಏಕೆಂದರೆ ಹೆಚ್ಚಾಗಿ ಹಿಂದೂ ಜನರ ಹಬ್ಬ ಹರಿದಿನಗಳನ್ನೆಲ್ಲ ಶುಕ್ಲ ಕೃಷ್ಣಪಕ್ಷದ ತದಿಗೆ, ಚೌತಿ, ಅಷ್ಟಮಿ, ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆ, ರೋಹಿಣಿ, ಶ್ರವಣ ಮುಂತಾದ ತಿಥಿ ನಕ್ಷತ್ರಗಳೇ ನಿರ್ಣಯಿಸುತ್ತವೆ. ಆದ್ದರಿಂದ ಸಿದ್ಧಾಂತಕಾರರು ಒಂದೇ ನೊಗಕ್ಕೆ ಸೌರಮಾನವರ್ಷ, ಚಾಂದ್ರಮಾನವರ್ಷಗಳನ್ನು ಕಟ್ಟಿ ಪಂಚಾಂಗ ರಥವನ್ನು ನಡೆಸುವ ಏರ್ಪಾಡು ಮಾಡಿದರು. 
ಅಧಿಕಮಾಸ : ಈ ಏರ್ಪಾಡಿನಲ್ಲಿ ಸೌರಮಾಸಗಳನ್ನು ಚಾಂದ್ರಮಾಸಗಳಿಗೆ ಹೆಣೆಯುವ ಹೆಜ್ಜೆ ಮೊದಲನೆಯದು. ಸೌರಮೇಷಕ್ಕೆ ಚಾಂದ್ರ ಚೈತ್ರ, ಸೌರ ವೃಷಭಕ್ಕೆ ವೈಶಾಖ ಇತ್ಯಾದಿಯಾಗಿ ಸೌರಮೀನಕ್ಕೆ ಚಾಂದ್ರ ಫಲ್ಗುಣ ಹೊಂದಿಕೊಳ್ಳಬೇಕು. ಈ ಹೊಂದಿಕೆ ಅನಿವಾರ್ಯವಾಗಿ ನಿಲ್ಲಲಿ ಎಂಬ ಉದ್ದೇಶದಿಂದ ಹೂಡಿದ ಯೋಜನೆ ಈ ರೀತಿ: ಸೌರಮೀನ ಮಾಸದಲ್ಲಿ ಘಟಿಸುವ ಅಮಾವಾಸ್ಯಾ ನಂತರದ ಮಾಸಕ್ಕೆ ಮೀನದ ಮುಂದಿನ ಮೇಷ ಸಂಕ್ರಮಣಕ್ಕೆ ಹೊಂದುವ ಚೈತ್ಯವೆಂಬ ಹೆಸರು. ಮೇಷ ಮಾಸದಲ್ಲಿ ಘಟಿಸುವ ಅಮಾವಾಸ್ಯಾ ನಂತರದ ಮಾಸಕ್ಕೆ ವೈಶಾಖವೆಂಬ ಹೆಸರು ಇತ್ಯಾದಿ ಆಗಿರಬೇಕು. ಸಾಮಾನ್ಯವಾಗಿ ಚಾಂದ್ರಮಾಸದ ಅವಧಿ ಸೌರಮಾಸದ ಅವಧಿಗಿಂತ ಕಡಿಮೆ ಆದ್ದರಿಂದ ಒಂದೊಂದು ಸಲ ಒಂದೇ ಸೌರಮಾಸದಲ್ಲಿ ಎರಡು ಅಮಾವಾಸ್ಯೆಗಳು ಘಟಿಸಬಹುದು. ಆಗ ಮೊದಲನೆಯ ಚಾಂದ್ರಮಾಸ ಅಧಿಕವಾಗುತ್ತದೆ, ಎರಡನೆಯದು ಅದೇ ಹೆಸರಿನ ನಿಜಮಾಸವಾಗುತ್ತದೆ. ಉದಾಹರಣೆಗೆ ವೃಷಭ ಮಾಸದ ಮೊದಲಲ್ಲೊಂದು, ಕಡೆಯಲ್ಲೊಂದು ಅಮಾವಾಸ್ಯೆ ಬಂದರೆ, ಮೊದಲಿನ ಅಮಾವಾಸ್ಯಾನಂತರದ ತಿಂಗಳು ಅಧಿಕ ಜ್ಯೇಷ್ಠ, ಎರಡನೆಯ ಅಮಾವಾಸ್ಯಾ ನಂತರದ್ದು ನಿಜ ಜ್ಯೇಷ್ಠ ಆಗುತ್ತದೆ, ಅಂತೂ ಸೌರಮಾಸ ಚಾಂದ್ರಮಾಸದ ಹೆಸರನ್ನು ನಿರ್ಣಯಿಸುತ್ತದೆ. 

ಕ್ಷಯಮಾಸ : ಇಲ್ಲಿ ಮತ್ತೊಂದು ವಿಷಯವನ್ನು ಗಮನಕ್ಕೆ ತಂದುಕೊಳ್ಳಬೇಕಾಗುತ್ತದೆ. ಸೌರ ಧನುರ್ಮಕರಗಳ ಮಾಸಗಳ ಅವಧಿ ಸರಾಸರಿಗಿಂತ ಕಡಿಮೆಯೆಂದು ಆಗಲೇ ತಿಳಿಸಿದೆ. ಈ ಮಾಸಗಳಲ್ಲಿ ನಡೆಯುವ ಚಾಂದ್ರಮಾಸಗಳ ಅವಧಿ ಒಂದೊಂದು ಸಲ ಸೌರಮಾಸಾವಧಿಗಳಿಗಿಂತ ಹೆಚ್ಚಾಗಬಹುದು. ಇದರ ಜೊತೆಗೆ ಇಂಥ ಸಂಕ್ರಮಣವೊಂದಕ್ಕೆ ಕೆಲವೇ ಘಳಿಗೆಗಳಿಗೆ ಮುಂಚೆ ಅಮಾವಾಸ್ಯೆ ಸಂಭವಿಸಿದರೆ, ಮುಂದಿನ ಅಮಾವಾಸ್ಯೆ ಮುಂದಿನ ಸಂಕ್ರಮಣಾ ನಂತರ ಸಂಭವಿಸಬಹುದು. ಆಗ ಒಂದು ಸೌರಮಾಸದಲ್ಲೆಲ್ಲ ಯಾವ ಅಮಾವಾಸ್ಯೆಯೂ ಘಟಿಸುವುದಿಲ್ಲ. ಆ ಮಾಸ ಕ್ಷಯಮಾಸವಾಗುತ್ತದೆ. ಉದಾ: ಧನು ಸಂಕ್ರಮಣಕ್ಕೆ ಒಂದೆರಡು ಘಳಿಗೆ ಮುಂಚೆ ಅಮಾವಾಸ್ಯೆಯಾದರೆ ಹುಟ್ಟುವ ಮಾಸ ಮಾರ್ಗಶಿರ. ಮಾರ್ಗಶಿರ ಬಹುಳ ಅಮಾವಾಸ್ಯೆ ಮಕರ ಸಂಕ್ರಮಣಾನಂತರ ಕೆಲವು ವಿಘಳಿಗೆಗಳಲ್ಲಿ ಮುಕ್ತಾಯವಾದರೆ, ಹುಟ್ಟುವ ಮಾಸ ಕುಂಭ ಸಂಕ್ರಮಣಕ್ಕೆ ಹೊಂದಿರುವ ಮಾಘಮಾಸ, ಪುಷ್ಯ ಕ್ಷಯವಾಗುತ್ತದೆ. ಹೀಗೆ ಕ್ಷಯಮಾಸವಾದಾಗಲೆಲ್ಲ ಅದರ ಹಿಂದಿನ 5 ತಿಂಗಳಿಗೊಂದು ಅಧಿಕಮಾಸ , ಮುಂದಿನ 5 ತಿಂಗಳೊಳಗೊಂದು ಅಧಿಕ ಮಾಸ ಬಂದೇ ಬರುತ್ತದೆ. ಇದರ ಅರ್ಥ ಒಂದು ಚಾಂದ್ರ-ಸೌರವರ್ಷದಲ್ಲಿ 12 ಅಥವಾ 13 ಚಾಂದ್ರಮಾಸಗಳಿರಬಹುದೇ ಹೊರತು 11 ಎಂದೂ ಇರುವುದಿಲ್ಲ. ಉದಾ : ಕ್ರಿ.ಶ 1963ಕ್ಕೆ ಸರಿಯಾದ ಶೋಭಕೃತ್ ಸಂವತ್ಸರದಲ್ಲಿ ಪುಷ್ಯ ಕ್ಷಯವಾಗುತ್ತದೆ. ಆ ಸಂವತ್ಸರದ ಅಶ್ವಯುಜ ಅಧಿಕವಾಗುತ್ತದೆ. ಮುಂದಿನ ಕ್ರೋಧಿ ಸಂವತ್ಸರದ ಚೈತ್ರವು ಅಧಿಕವಾಗುತ್ತದೆ. ಅಲ್ಲಿಗೆ ಶೋಭಕೃತ್ ಸಂವತ್ಸರಕ್ಕೆ 12 ತಿಂಗಳು, ಕ್ರೋಧಿಗೆ 13 ಎಂದಾಗುತ್ತದೆ. 
ಚಾಂದ್ರಮಾಸ, ಸೌರಮಾಸಗಳ ಅಧಿಕತಮ, ಕನಿಷ್ಠತಮ ಅವಧಿಗಳ ಪರಿಶೀಲನೆಯಿಂದ ಮಾರ್ಗಶಿರ, ಪುಷ್ಯ ಮತ್ತು ಮಾಘಮಾಸಗಳು ಮಾತ್ರ ಕ್ಷಯಮಾಸಗಳಾಗುವುದು ಸಾಧ್ಯ. ಇವುಗಳಲ್ಲಿ ಪುಷ್ಯ ಕ್ಷಯವಾಗುವುದು ಹೆಚ್ಚು ಸಂಭವ. ಪುಷ್ಯ ಮಾಸ ಬಿಟ್ಟು ಉಳಿದೆಲ್ಲಾ ಮಾಸಗಳು ಅಧಿಕವಾಗಬಹುದು. ಆದರೆ ಮಾಘಮಾಸ ಅಧಿಕವಾಗುವುದು ತಾತ್ತ್ವಿಕವಾಗಿ ಸಾಧ್ಯವಾದರೂ ತಕ್ಕ ಸನ್ನಿವೇಶಗಳು ಒದಗುವುದು ತೀರ ಅಸಂಭವ. ಉದಾ: ಕ್ರಿಸ್ತಶಕಾದಿಯಿಂದ ಕ್ರಿ.ಶ 2000 ತನಕ ಒಂದು ಸಲವೂ ಮಾಘ ಅಧಿಕವಾಗಿಲ್ಲ; ಅಧಿಕವಾಗದು. 

ಪ್ರತಿ ಹತ್ತೊಂಬತ್ತು ವರ್ಷಗಳಲ್ಲಿ ಏಳು ಅಧಿಕಮಾಸಗಳು ಬರುತ್ತವೆ. ಕ್ಷಯಮಾಸವಾದರೋ ಸರಾಸರಿ 63 ವರ್ಷಗಳಿಗೊಂದು ಸಲ ಸಂಭವಿಸುತ್ತದೆ. ಆದರೆ ಒಂದೊಂದು ಸಲ 19 ವರ್ಷಗಳಾದ ಕೂಡಲೇ ಕ್ಷಯಮಾಸ ಒದಗಬಹುದು. ಒಂದೊಂದು ಸಲ 141 ವರ್ಷಗಳಾದನಂತರವೇ ಒದಗಬಹುದು. 

ವರ್ಷದ ನಾಲ್ಕು ಪರ್ವ ಕಾಲಗಳು : ಅಧಿಕ ಮಾಸಗಳನ್ನು ಸೇರಿಸುವ ಉದ್ದೇಶ ಚಾಂದ್ರ ಸಂವತ್ಸರವು ಋತುಗಳನ್ನು ಅನುಸರಿಸಲಿ ಎಂದು. ಎಂದಿನ ತನಕ ಸೌರವರ್ಷಾರಂಭ ವಸಂತ ವಿಷುವತ್ಪಣ್ಯಕಾಲವಾಗಿರುತ್ತದೆಯೋ ಅಂದಿನ ತನಕ ಇದು ಸಾಧ್ಯ. ಅಂದಿನ ತನಕವೂ ಚೈತ್ರ ವೈಶಾಖಗಳು ವಸಂತ ಋತುವಾಗಿರುತ್ತದೆ. ವರಹಾಮಿಹಿರಾಚಾರ್ಯರ ಕಾಲದಲ್ಲಿಯೇನೋ ಮೇಷ ಸಂಕ್ರಮಣ ವಸಂತ ವಿಷುವತ್ಪುಣ್ಯಕಾಲವು ಕಟಕ, ತುಲಾ, ಮಕರ ಸಂಕ್ರಮಣಗಳು ಅನುಕ್ರಮವಾಗಿ ದಕ್ಷಿಣಾಯನ ಪುಣ್ಯಕಾಲ, ಶರದ್ವಿಷುವತ್ಪುಣ್ಯಕಾಲ, ಉತ್ತರಾಯಣ ಪುಣ್ಯಕಾಲಗಳು ಆಗಿದ್ದವು. ಆದ್ದರಿಂದಲೇ ಅವರು ಸೌರವರ್ಷಾದಿಯನ್ನು ಕೃತ್ತಿಕಾದಿಯಿಂದ ಅಶ್ವಿನ್ಯಾದಿಗೆ ಬದಲಾಯಿಸಿದುದಾಗಿದೆ. 

ಸೂರ್ಯೋದಯ, ಮಧ್ಯಾಹ್ನ, ಸೂರ್ಯಾಸ್ತ ಮತ್ತು ಮಧ್ಯರಾತ್ರಿಗಳು ಹೇಗೆ ದಿವಸದ ಸಂಧಿಕಾಲಗಳೋ ಹಾಗೆಯೇ ವಸಂತ ವಿಷು, ದಕ್ಷಿಣಾಯನ, ಶರದ್ವಿಷು ಮತ್ತು ಉತ್ತರಾಯನ ಪುಣ್ಯಕಾಲಗಳು ವರ್ಷದ ಸಂಧಿಕಾಲಗಳಾದ್ದರಿಂದ ಪರ್ವ ಕಾಲಗಳು. ಈ ಕಾಲಗಳ ಲಕ್ಷಣಗಳನ್ನು ತಿಳಿಯೋಣ.

ಸೂರ್ಯ ಪೂರ್ವದಿಕ್ಕಿನಲ್ಲಿ ಹುಟ್ಟಿದರೂ ನಿತ್ಯ ದಿಗಂತದ ಒಂದೇ ಬಿಂದುವಿನಿಂದ ಎದ್ದು ಬರುವುದಿಲ್ಲ. ಉದಯಸ್ಥಾನ ಸಾಮಾನ್ಯವಾಗಿ ಪೂರ್ವದಿಕ್ಕಾದರೂ ಅಲ್ಲಿ ಅದು ಉತ್ತರಕ್ಕೂ ದಕ್ಷಿಣಕ್ಕೂ ಉಯ್ಯಾಲೆಯಂತೆ ಹರಿದಾಡುತ್ತಿರುತ್ತದೆ. ಎಂದು ಸೂರ್ಯ ದಕ್ಷಿಣತಮ ಸ್ಥಾನದಿಂದ ಹುಟ್ಟಿ ಬರುವುದೋ ಅಂದು ಉತ್ತರಾಯಣ ಪುಣ್ಯಕಾಲ. ಏಕೆಂದರೆ ಅಂದಿನಿಂದ ಸೂರ್ಯ ತನ್ನ ಉತ್ತರಾಭಿಮುಖ ಚಲನೆಯನ್ನು ಅಂದರೆ ಉತ್ತರದಿಕ್ಕಿನ ಅಯನವನ್ನು ಆರಂಭಿಸುವುದು. ಉತ್ತರಾಯನ ಪುಣ್ಯಕಾಲ ಉತ್ತರಾರ್ಧ ಗೋಳ ನಿವಾಸಿಗಳಿಗೆ ಚಳಿಗಾಲದ ಮಧ್ಯ ದಿವಸ, ಅಧಿಕತಮ ರಾತ್ರಿಯ ದಿವಸ. ಹೀಗೆ ಉತ್ತರಕ್ಕೆ ಸರಿಯುತ್ತಿರುವ ಸೂರ್ಯ ಎಂದು ತನ್ನ ಉತ್ತರತಮ ಸ್ಥಾನವನ್ನು ಮುಟ್ಟುವುದೋ ಅಂದು ದಕ್ಷಿಣಾಯನ ಪುಣ್ಯಕಾಲ. ಏಕೆಂದರೆ ಅಂದಿನಿಂದ ಅದು ದಕ್ಷಿಣಕ್ಕೆ ಸರಿಯಲು ಆರಂಭಿಸುವುದು. ದಕ್ಷಿಣಾಯನ ಪುಣ್ಯಕಾಲ ನಮಗೆ ಬೇಸಗೆಯ ಮಧ್ಯ ದಿವಸ, ಅಧಿಕತಮ ಹಗಲಿನ ದಿವಸ. 
ದಕ್ಷಿಣದಿಂದ ಉತ್ತರಕ್ಕೆ ಸರಿಯುತ್ತಿರುವಾಗ ಎಂದು ಸೂರ್ಯ ಈ ಎರಡು ಮಿತಿಗಳ ಮಧ್ಯಸ್ಥಾನವನ್ನು ಮುಟ್ಟುವುದೋ ಅಂದು ವಸಂತ ವಿಷುವತ್ಪುಣ್ಯಕಾಲ. ಇದು ವಸಂತ ಕಾಲ. ಗಿಡಗಳು ಚಿಗುರುವ ಕಾಲ, ವಸಂತ ವಿಷವತ್ಪುಣ್ಯ ದಿವಸದಲ್ಲಿ ಹಗಲು ರಾತ್ರಿಗಳು ಸಮವಾಗಿರುತ್ತವೆ.

ಉತ್ತರದಿಂದ ದಕ್ಷಿಣಕ್ಕೆ ಸರಿಯುತ್ತಿರುವಾಗ ಎಂದು ಸೂರ್ಯ ಮಧ್ಯಸ್ಥಾನವನ್ನು ತಲುಪುವುದೋ ಅಂದು ಶರದ್ವಿಷುವತ್ಪುಣ್ಯಕಾಲ. ಇದು ಸುಗ್ಗಿಯ ಕಾಲ, ಶರದ್ವಿಷುವತ್ಪುಣ್ಯ ದಿವಸದಲ್ಲಿಯೂ ಹಗಲು ಇರುಳುಗಳು ಸಮವಾಗಿರುತ್ತವೆ. 

ಈಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಒಂದಿದೆ. ವೇದಾಂಗ ಜ್ಯೋತಿಷ್ಯದ ಕಾಲದಲ್ಲಿ ಧನಿಷ್ಠೆಯನ್ನು ಸೂರ್ಯ ಪ್ರವೇಶಿಸುತ್ತಿದ್ದಾಗ ಘಟಿಸುತ್ತಿದ್ದ ಉತ್ತರಾಯನ ಪುಣ್ಯಕಾಲ ಬಹುಕಾಲಾಂತರದಲ್ಲಿ ವರಾಹಮಿಹಿರಾಚಾರ್ಯರ ಕಾಲದಲ್ಲಿ ಉತ್ತರಾಷಾಢದ ಎರಡನೆಯ ಪಾದದಲ್ಲಿ ಕಾಲಿಟ್ಟಾಗ ಘಟಿಸುತ್ತಿತ್ತು. ಹಾಗಾದರೆ ತರುವಾಯದ ಎಲ್ಲಾ ಯುಗಗಳಲ್ಲಿಯೂ ಸೂರ್ಯ ಉತ್ತರಾಷಾಢದ ಎರಡನೆಯ ಪಾದವನ್ನು ಸೇರಿದಾಗಲೇ ಉತ್ತರಾಯನ ಘಟಿಸುತ್ತದೆ ಎಂದು ನಿರೀಕ್ಷಿಸುವುದು ತಪ್ಪು. ಆದರೂ ಕಳೆದ 14 ಶತಮಾನಗಳಿಂದಲೂ ಈ ತಪ್ಪನ್ನೇ ಹಿಡಿದು ತಟಸ್ಥರಾಗಿ ಕುಳಿತ್ತಿದ್ದೇವೆ. ಆದ್ದರಿಂದಲೇ ಇಂದು ಸೂರ್ಯ ಮೂಲಾ ನಕ್ಷತ್ರದ 3ನೆಯ ಪಾದಕ್ಕೆ ಬಂದಾಗ ಉತ್ತರಾಯಣ ಪುಣ್ಯಕಾಲ ಸಂಭವಿಸಿದರೂ ಮಹಾನಕ್ಷತ್ರ ಉತ್ತರಾಷಾಢಾ ಎರಡನೆಯ ಪಾದಾದಿಯನ್ನೆ ಉತ್ತರಾಯನ ಕಾಲವಾಗಿ ಆಚರಿಸುತ್ತಿದ್ದೇವೆ. ಅದೇ ರೀತಿಯಲ್ಲಿ ಸೂರ್ಯ ಉತ್ತರಾಭಾದ್ರ 2 ನೆಯ ಪಾದವನ್ನು ಸೇರುವುದಕ್ಕೆ ಮುಂಚಿನ ಮಾರ್ಚಿ 22ರ ಅಮಾವಾಸ್ಯಾ ನಂತರದ ದಿವಸವನ್ನು ಚೈತ್ರ ಶುದ್ಧ ಪಾಡ್ಯಮಿ ಎಂದು ಕರೆದು ಯುಗಾದಿಯನ್ನು ಆಚರಿಸುವುದರ ಬದಲು ಮೇಷ ಸಂಕ್ರಮಣದ ಹಿಂದಿನ ದಿನ (ಏಪ್ರಿಲ್ 14 ರ ಹಿಂದಿನ ದಿನ) ಅಮಾವಾಸ್ಯಾ ನಂತರದ ದಿವಸವನ್ನು ಚೈತ್ರ ಶುದ್ಧ ಪಾಡ್ಯಮಿ ಎಂದು ಕರೆಯುತ್ತಿದ್ದೇವೆ.

ಪರಿಷ್ಕøತ ರಾಷ್ಟ್ರೀಯ ಪಂಚಾಂಗ : ಹಲವು ಶತಮಾನಗಳಿಂದ ಬೆಳೆದು ಬಂದಿರುವ ಈ ತಪ್ಪನ್ನು ತೊಡೆದುಹಾಕುವ ಉದ್ದೇಶದಿಂದ ಭಾರತ ಸರ್ಕಾರ ಮೇಘನಾದ ಸಹಾರ ಅಧ್ಯಕ್ಷತೆಯಲ್ಲಿ ಪಂಚಾಂಗ ಸುಧಾರಣಾ ಸಮಿತಿಯೊಂದನ್ನು 1952ರಲ್ಲಿ ನೇಮಿಸಿತು. ಇದರ ಸಲಹೆಯಂತೆ ಸರ್ಕಾರ ಶಕವರ್ಷ 1878ರಿಂದ ಅಂದರೆ ಕ್ರಿ.ಶ.1956 ರಿಂದ ರಾಷ್ಟ್ರೀಯ ಪಂಚಾಂಗವನ್ನು ಆಚರಣೆಗೆ ತಂದಿದೆ. ರಾಷ್ಟ್ರೀಯ ಪಂಚಾಂಗದಂತೆ ಸೂರ್ಯ ವಸಂತ ವಿಷುವದ್ಬಿಂದುವಿನಿಂದ ಹೊರಟು ಕ್ರಾಂತಿವೃತ್ತವನ್ನು ಬಳಸಿ ತಿರುಗಿ ವಸಂತ ವಿಷುವದ್ಬಿಂದುವನ್ನು ಸೇರುವ ಕಾಲಕ್ಕೆ ಸೌರವರ್ಷವೆಂದು ಹೆಸರು. ಸೂರ್ಯ ಸಿದ್ಧಾಂತದ ಧ್ಯೇಯವೂ ಇದೇ ಆಗಿತ್ತೆಂದು ಇಲ್ಲಿ ತಿಳಿಸುವುದು ಯುಕ್ತ. ಸೂರ್ಯ ವಸಂತ ವಿಷುವತ್ಕಾಲದಲ್ಲಿ ಕೃತ್ತಿಕೆಯ ಬದಲು ಅಶ್ವಿನಿಯಲ್ಲಿರುತ್ತಿದ್ದುದರಿಂದಲೇ ಅವರು ಅವರ ಕಾಲದಲ್ಲಿ ಅಶ್ವಿನಿ ಮಹಾನಕ್ಷತ್ರದಿಂದ ಸೌರವರ್ಷವನ್ನು ಆರಂಭಿಸಿದರು. ಈ ಸೌರ ಋತುವರ್ಷದ ಅವಧಿ ಪರಿಷ್ಕøತ ರಾಷ್ಟ್ರೀಯ ಪಂಚಾಂಗದಂತೆ 365.2422 ದಿವಸಗಳು. ವಿಷುವತ್ಪುಣ್ಯಕಾಲ ಘಟಿಸಿದ ಅನಂತರ ಮಧ್ಯರಾತ್ರಿಯಿಂದ ವ್ಯಾವಹಾರಿಕವಾಗಿ ಸೌರವರ್ಷಾರಂಭವಾಗುತ್ತದೆ. ಸೌರಮಾಸಗಳ ಹೆಸರು ಚೈತ್ರ, (ಮೇಷ, ಮಾಧವ), ವೈಶಾಖ(ವೃಷಭ, ಶುಕ್ರ), ಜ್ಯೇಷ್ಠ (ಮಿಥುನ, ಶುಚಿ), ಆಷಾಢ (ಕರ್ಕಟ, ನಭಸ್), ಶ್ರಾವಣ(ಸಿಂಹ, ನಭಸ್ಯ), ಭಾದ್ರ (ಕನ್ಯಾ, ಈಶ), ಅಶ್ವಿನ (ತುಲಾ, ಊರ್ಜ) ಕಾರ್ತಿಕ(ವೃಶ್ಚಿಕ, ಸಹಸ್), ಅಗ್ರಹಾಯಣ (ಧನಸ್ಸು, ಸಹಸ್ಯ), ಪೌಷ (ಮಕರ, ತಪಸ್), ಮಾಘ (ಕುಂಭ, ತಪಸ್ಯ), ಮತ್ತು ಫಾಲ್ಗುಣ (ಮೀನ, ಮಧು), ಸಾಧಾರಣ ವರ್ಷಗಳಲ್ಲಿ ಈ ತಿಂಗಳುಗಳಲ್ಲಿರುವ ದಿವಸಗಳು ಅನುಕ್ರಮವಾಗಿ 30, 31, 31, 31, 31, 31, 30, 30, 30,30,30, 30 ದಿವಸಗಳು; ಅಂದರೆ ಒಟ್ಟಿಗೆ 365 ದಿವಸಗಳು. ಅಧಿಕ ವರ್ಷದಲ್ಲಿ ಚೈತ್ರಮಾಸಕ್ಕೆ 31 ದಿವಸಗಳನ್ನು ಕೊಡುತ್ತದೆಯಾದ್ದರಿಂದ ಆ ವರ್ಷದಲ್ಲಿ 366 ದಿವಸಗಳಿರುವುವು. ಶಕವರ್ಷ ಸಂಖ್ಯೆಗೆ 78ನ್ನು ಸೇರಿಸಿದಾಗ ದೊರೆವ ಫಲ 4 ರಿಂದ ಭಾಗವಾದರೆ ಆ ವರ್ಷವನ್ನು ಅಧಿಕ ವರ್ಷವೆಂದು ಪರಿಗಣಿಸಲಾಗುತ್ತದೆ. ಉದಾ: ಶಕವರ್ಷ 1878, ಅಧಿಕ ವರ್ಷ(187; +78= 1956, ಇದು ನಾಲ್ಕರಿಂದ ಭಾಗವಾಗುವುದು.) ಈ ವ್ಯವಸ್ಥೆಯಂತೆ ವರ್ಷದ ಸರಾಸರಿ ಅವಧಿ 365.25 ದಿವಸಗಳು. ಇದು ನಿಷ್ಕøಷ್ಟ ಅವಧಿಯಾದ 36.24 22 ದಿವಸಗಳಿಗಿಂತ ಕೊಂಚ ಹೆಚ್ಚಾದ್ದರಿಂದ ಶಕವರ್ಷದ ಸಂಖ್ಯೆಗೆ 78ನ್ನು ಸೇರಿಸಿದಾಗ ಫಲಿಸಿದ ಮೊತ್ತ ಪೂರ್ಣ ಶತಕವಾಗಿದ್ದು ಆ ಮೊತ್ತ 400 ರಿಂದ ಭಾಗವಾದರೆ ಮಾತ್ರ ಆ ವರ್ಷ ಅಧಿಕ ವರ್ಷವಾಗುತ್ತದೆ. ಇಲ್ಲದಿದ್ದರೆ ಸಾಧಾರಣ ವರ್ಷವಾಗಿಯೇ ಉಳಿಯುತ್ತದೆ.

ಪರಿಷ್ಕøತ ರಾಷ್ಟ್ರೀಯ ಪಂಚಾಂಗದ ಪ್ರಧಾನ ಅಂಕೆಅಂಶಗಳನ್ನು ಸೂರ್ಯ ಸಿದ್ಧಾಂತದ ಅಂಕೆಅಂಶಗಳನ್ನೂ ಹೋಲಿಕೆಗಾಗಿ ಕೆಳಗಿನ ಪಟ್ಟಿಯಲ್ಲಿ ಕೊಟ್ಟಿದೆ.

ಸೂರ್ಯಸಿದ್ಧಾಂತ
ಪರಿಷ್ಜ್ರತ ರಾಷ್ಟ್ರೀಯ ಒಂಚಾಂಗ

ಸಂಖ್ಯೆ
ಸೌರ
ಮಾಸ
ಮಾಸಾದಿಯ ಸಾಯನ ರೇಖಾಂಶ (1956)
ಮಾಸಾವಧಿ 
ದಿ ಗಂ ಮಿ
ಮಾಸಾದಿಯ ಪಾಶ್ಚಾತ್ಯ ತಾರೀಕು 1956 (ಚಲ)
ಸೌರಮಾಸ
ಮಾಸಾದಿಯ ಸಾಯನರೇಖಾಂಶ (ಸ್ಥಿರ)
ಮಾಸಾವದಿ ಖಗೋ
ಳೀಯ 
ದಿ ಗಂ ಮಿ
ಮಾಸಾವಧಿ ವ್ಯಾವಹಾರಿಕ (ದಿ)
ಮಾಸಾ
ದಿಯ ಪಾಶ್ಚಾತ್ಯ ತಾರೀಕು (ಸ್ಥಿರ)
I್ಮತು

1
ಮೇಷ
230 15
30 22 27
ಏಪ್ರಿಲ್ 13
ಚೈತ್ರ
00
30 11 25.2
30(ಸಾ)
ಮಾರ್ಚ್ 22(ಸಾ)
ಉತ್ತರ

31(ಅ)
ಮಾರ್ಚ್ 21(ಅ)
ವಸಂತ

2
ವೃಷಭ
530 15
31 10 5
ಮೇ 14
ವೈಶಾಖ
300
30 23 29.6
31
ಏಪ್ರಿಲ್ 21
ಗ್ರೀಷ್ಮ

3
ಮಿಥುನ
830 15
31 15 28
ಜೂನ್ 14
ಚ್ಯೇಷ್ಠ
600
31 8 10.1
31
ಮೇ 22 

4
ಕಟಕ
1130 15
31 11 24
ಜುಲೈ 16
ಆಷಾಢ
900
31 10 54.6
31
ಜೂನ್ 22
ವರ್ಷ

5
ಸಿಂಹ
1430 15
31 0 27
ಆಗಸ್ಟ್ 16
ಶ್ರಾವಣ
1200
31 6 53.1
31
ಜುಲೈ 23

6
ಕನ್ಯಾ
1730 15
30 10 36
ಸೆಪ್ಟಂಬರ್ 16
ಭಾದ್ರ
1500
31 21 18.
31
ಆಗಸ್ಟ್ 23
ಶರತ್

7
ತುಲಾ
2030 15
29 21 27
ಅಕ್ಟೋಬರ್ 16
ಆಶ್ವಿಜ
1800
30 8 58.2
30
ಸೆಪ್ಪೆಂಬರ್ 23

8
ವೃಶ್ಚಿಕ
2330 15
29 11 46
ನವಂಬರ್ 15
ಕಾರ್ತಿಕ
2100
29 21 14.6
30
ಅಕ್ಟೋಬರ್23
ಹೇಮಂತ

9
ಧನಸ್
2630 15
29 7 38
ಡಿಸೆಂಬರ್ 15
ಅಗ್ರಹಾ
ಯಣ
2400
29 13 8.7
30
ನವೆಂಬರ್ 22

10
ಮಕರ
2930 15
29 10 45
ಜನವರಿ 14
ಪುಷ್ಯ
2700
29 10 38.6
30
ಡಿಸೆಂಬರ್ 22

11
ಕುಂಬ
3230 15
29 19 41
ಫೆಬ್ರುವರಿ 12
ಮಾಘ
3000
29 14 18.5
30
ಜನವರಿ 21
ಶಿಶಿರ

12
ಮೀನ
3530 15
30 8 29
ಮಾರ್ಚ್ 14
ಪಾಲ್ಗುಣ
3300
29 23 18.9
30
ಫೆಬ್ರುವರಿ 20
ಪೂರ್ವವಸಂತ

ಒಟ್ಟು 365 	6 13

365 5 48.8
365(ಸಾ)
366(ಅ)

ಪರಿಷ್ಕøತ ಪಂಚಾಂಗದ ಸೌರವರ್ಷ ಯಾವಾಗಲೂ ವಸಂತ ವಿಷುವತ್ಪುಣ್ಯಕಾಲ ಘಟಿಸಿದ ಮಾರನೆಯ ದಿವಸದಿಂದ ಆರಂಭವಾಗುತ್ತದೆ. ಇತರ ಮೂರು ಪರ್ವಕಾಲಗಳಾದ ದಕ್ಷಿಣಾಯನ, ಶರದ್ವಿಷು ಮತ್ತು ಉತ್ತರಾಯನ ಕಾಲಗಳು ಕಟಕ, ತುಲಾ ಮತ್ತು ಮಕರಮಾಸದ ಆರಂಭ ದಿವಸಗಳ ಹಿಂದಿನ ದಿವಸ ಘಟಿಸಿರುತ್ತವೆ. ಅಥವಾ ಆರಂಭ ದಿವಸದ ಮಧ್ಯರಾತ್ರಿಯೊಳಗೆ ಸಂಭವಿಸುತ್ತವೆ. ಪಂಚಾಂಗದಲ್ಲಿ ಸೌರವರ್ಷದ ತಾರೀಕು, ವಾರ, ಪಾಶ್ಚಾತ್ಯ ತಿಂಗಳು, ತಾರೀಕು, ಆ ದಿವಸ ಬೆಳಗಿನ ಝಾವ 5-30 ಗಂಟೆಗೆ ಸರಿಯಾದ ಸೂರ್ಯನ ಸಾಯನ ರೇಖಾಂಶ ಡಿಗ್ರಿ, ಮಿನಿಟ್, ಸೆಕೆಂಡುಗಳಲ್ಲಿ ಸೂರ್ಯೋದಯಾಸ್ತ ಕಾಲಗಳು, ಚಾಂದ್ರ ತಿಥಿ, ತಿಥ್ಯಂತಕಾಲಗಳು, ನಕ್ಷತ್ರ, ನಕ್ಷತ್ರಾಂತ್ಯಕಾಲಗಳು, ಮಹಾನಕ್ಷತ್ರ ಮಹಾಪ್ರವೇಶಕಾಲಗಳು, ಸಾಯನ ಮಾಸಾದಿಕಾಲಗಳು ಮತ್ತು ನಿಯರನ ಸಂಕ್ರಮಣಾದಿ ಕಾಲಗಳು, ವ್ಯತೀಪಾತ, ವೈಧೃತೀ ಯೋಗಾಂತ ಕಾಲಗಳು ಮತ್ತು ಕಡೆಯದಾಗಿ ವಿವಿಧ ಪ್ರಾಂತಗಳ ಹಬ್ಬ ವ್ರತಗಳು ಇವನ್ನೆಲ್ಲ ಕೊಟ್ಟಿರುತ್ತದೆ. ಕಾಲಗಳೆಲ್ಲ 82 1/20 ಪೂರ್ವರೇಖಾಂಶಕ್ಕೆ ಸರಿಯಾದ ಭಾರತದ ಶಿಷ್ಟಕಾಲದ ಗಂಟೆ ಮಿನಿಟುಗಳಲ್ಲಿ, ಉಜ್ಜಯಿನಿಯ ಅಕ್ಷಾಂಶಕ್ಕೆ (ಉತ್ತರ 230 11) ಗುಣಿತವಾಗಿವೆ.
ಮಾಸನಾಮಗಳು : ಪ್ರತಿಯೊಂದು ಸೌರಮಾಸಕ್ಕೂ ಪರ್ಯಾಯವಾಗಿ ಮೂರು ಹೆಸರುಗಳನ್ನು ಕೊಟ್ಟಿದೆಯಷ್ಟೆ. ಇವುಗಳ ಪೈಕಿ ಮೇಷ ವೃಷಭಾದಿಗಳು ಈಜಿಪ್ಟಿನಿಂದ ಗ್ರೀಸ್ ಮಾರ್ಗವಾಗಿ ಈ ದೇಶಕ್ಕೆ ಬಂದಿವೆ ಎಂದು ಅಗಲೆ ತಿಳಿಸಿದೆ. 
ಚೈತ್ರವೈಶಾಖಾದಿಗಳು ಸೌರಮಾಸಗಳಿಗೆ ಹೊಂದಿಸಿರುವ ಚಾಂದ್ರಮಾಸಗಳು. ಈ ಹೆಸರುಗಳೆಲ್ಲ ನಕ್ಷತ್ರಗಳಿಂದ ವ್ಯುತ್ಪನ್ನವಾಗಿವೆ. ಚಿತ್ರಾ ನಕ್ಷತ್ರದಲ್ಲಿ ಪೂರ್ಣಿಮೆ ಸಂಭವಿಸುವ ತಿಂಗಳಿಗೆ ಚೈತ್ರ, ಹಾಗೆಯೇ ವಿಶಾಖ, ಜ್ಯೇಷ್ಠ, ಪೂರ್ವ-ಉತ್ತರ ಆಷಾಢಗಳು, ಶ್ರವಣ ಪೂರ್ವ-ಉತ್ರರಾಭಾದ್ರಗಳು, ಅಶ್ವಿನೀ, ಕೃತ್ತಿಕಾ, ಮೃಗಶಿರಾ, ಪುಷ್ಯಮೀ, ಮಘ, ಪೂರ್ವ ಉತ್ತರ ಫಲ್ಗುನೀಗಳಲ್ಲಿ ಹುಣ್ಣಿಮೆ ಸಂಭವಿಸುವ ಚಾಂದ್ರಮಾಸಗಳಿಗೆ ಅನುಕ್ರಮವಾಗಿ ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣಗಳೆಂಬ ಹೆಸರುಗಳನ್ನು ಪುರಾತನ ಋಷಿಗಳು ಇಟ್ಟರು. ಇನ್ನು ಮಧು, ಮಾಧವ ಇತ್ಯಾದಿಗಳು ವೇದರ್ಷಿಗಳು ಮಾಸಗಳಿಗೆ ಇಟ್ಟ ಋತುಧರ್ಮಸೂಚಕ ಹೆಸರುಗಳು.

ಚಾಂದ್ರಸೌರವರ್ಷದ ಪರಿಷ್ಕರಣ : ರಾಷ್ಟ್ರೀಯ ಪಂಚಾಂಗ ಸೌರವರ್ಷವನ್ನು ಪರಿಷ್ಕರಿಸಿದಿದ್ದರೂ ಚಾಂದ್ರಸೌರವರ್ಷದ ಗೊಡವೆಗೆ ಹೋಗಿಲ್ಲ. ಬಂಗಾಳಾ, ಒರಿಸ್ಸ, ತಮಿಳುನಾಡು, ಕೇರಳಗಳನ್ನುಳಿದು ಭಾರತದ ಎಲ್ಲ ಪ್ರಾಂತಗಳಲ್ಲಿಯೂ ಚಂದ್ರ ಸೌರವರ್ಷವೇ ಆಚರಣೆಯಲ್ಲಿರುವುದು. ಈಗಿನ ವ್ಯವಸ್ಥೆಯಲ್ಲಿ ಚಾಂದ್ರಮಾಸವನ್ನು ಸಂಕ್ರಮಣಗಳಿಗೆ ಹೆಣೆದಿದೆ. ಅದರ ಬದಲು ಸಾಯನ ಸೌರಮಾಸಗಳಿಗೆ ಹೆಣೆದರೆ, ಅಂದರೆ ಪರಿಷ್ಕøತ ಸೌರಚೈತ್ರಾದಿಯ ಹಿಂದಿನ ಅಮಾವಾಸ್ಯೆಯ ಅನಂತರದ ದಿವಸ ಚೈತ್ರ, ಶುಕ್ಲ ಪಾಡ್ಯಮಿಯಾಗಬೇಕು ಇತ್ಯಾದಿಯಾಗಿ ನಿರ್ಣಯಿಸಿದರೆ, ಚಾಂದ್ರಸೌರವರ್ಷ ಋತುಧರ್ಮಕ್ಕೆ ಅನುಗುಣವಾಗಿರುತ್ತದೆ. ಈಗ ನಾವು ಚೈತ್ರವೆಂದು ಕರೆಯುತ್ತಿರುವ ಚಾಂದ್ರಮಾಸ ಶಾಸ್ತ್ರದೃಷ್ಟಿಯಿಂದ ಫಾಲ್ಗುಣವಾಗಿರಬೇಕು. ಇದೇ ರೀತಿ ಇತರ ತಿಂಗಳುಗಳೂ, ಈ ಸುಧಾರಣೆಯನ್ನು ಯಾವ ವ್ಯಾವಹಾರಿಕ ಅಡಚಣೆಗೂ ಈಡಾಗದೆ ಕಾರ್ಯರೂಪಕ್ಕೆ ತರಬಹುದು. ಈಗಿನ ವ್ಯವಸ್ಥೆಯಂತೆ ಇಂದು ಅಧಿಕಮಾಸ ಬಂದಾಗ ಆದನ್ನು ಬಿಟ್ಟುಬಿಟ್ಟು ಅಲ್ಲಿಂದ ಮುಂದಕ್ಕೆ ಚಾಂದ್ರಮಾಸಗಳನ್ನು ಸಾಯನ ಸೌರಮಾಸಗಳ ನೊಗಕ್ಕೆ ಕಟ್ಟಿದರಾಯಿತು. ಗಣಿತದಂತೆ ಸೂರ್ಯಸಿದ್ಧಾಂತದ 1,901 ಸೌರವರ್ಷಗಳಲ್ಲಿ 701 ಅಧಿಕಮಾಸಗಳು ಒದಗುತ್ತವೆ. ಆದರೆ ಅದೇ 1,901 ಸಾಯನ ವರ್ಷಗಳಲ್ಲಿ 700 ಅಧಿಕ ಮಾಸಗಳು ಬರುತ್ತವೆ. ಸಿದ್ಧಾಂತ ಪಂಚಾಂಗ ಸ್ಥಾಪಿತವಾಗಿ 1,400 ವರ್ಷಗಳು ಆಗಲೆ ಕಳೆದಿವೆ. ಆದ್ದರಿಂದಲೇ ಈ ಅವಧಿಯಲ್ಲಿ ಒಂದು ಅಧಿಕ ಮಾಸವನ್ನು ಹೆಚ್ಚಾಗಿ ಎಣಿಸಿದ್ದೇವೆ.
ಶಕಗಳು : ತಿಥಿ, ಮಾಸ, ಮತ್ತು ವರ್ಷಗಳ ನಿರ್ಣಯವಾದ ತರುವಾಯವೂ ವರ್ಷಗಳನ್ನು ಎಣಿಸುವ ಕೆಲಸ ಉಳಿದಿರುತ್ತದೆ. ಭಾರತದ ಅಧಿಕ ಸಂಖ್ಯೆಯ ಪ್ರಾಂತಗಳಲ್ಲಿ ಶಾಲಿವಾಹನ ಅಥವಾ ಕನಿಷ್ಕ ಶಕ ಆಚರಣೆಯಲ್ಲಿ ಇದೆಯೆಂಬ ಕಾರಣದಿಂದ ರಾಷ್ಟ್ರೀಯ ಪಂಚಾಂಗ ಕನಿಷ್ಕ ಶಕವನ್ನು ಅಂಗೀಕರಿಸಿದೆ. ಈ ಶಕ ಪ್ರಾಯಶಃ ಕ್ರಿ.ಪೂ. 123 ರಲ್ಲಿ ಆರಂಭವಾಗಿರಬೇಕು. ಆದರೆ ಶಕವರ್ಷ 101, 102 ಇತ್ಯಾದಿಗಳನ್ನು ಸೌಕರ್ಯಕ್ಕಾಗಿ 1, 2 ಎಂದೇ ಕರೆಯುವ ರೂಢಿ ಬಂದಿತು. ಹಾಗೆಯೇ ಶಕವರ್ಷ 201, 202 ಇತ್ಯಾದಿಗಳನ್ನೂ 1, 2 ಎಂದೇ ಕರೆಯುವ ವಾಡಿಕೆ ಹುಟ್ಟಕೊಂಡಿತು. ಆದರೆ ಅಷ್ಟು ಹೊತ್ತಿಗೆ ಈ ರೂಢಿಯಿಂದ ಒದಗಬಹುದಾದ ಪ್ರಮಾದಗಳನ್ನು ಮನಗಂಡು ಅಲ್ಲಿಂದ ಮುಂದಕ್ಕೆ ಶತಕಗಳನ್ನು ಇಡುವ ಪದ್ಧತಿಯನ್ನು ತ್ಯಜಿಸಿದರು. ಹೀಗಾಗಿ ಶಕವರ್ಷ 301ನ್ನು 1 ಎಂದೆಣಿಸುವುದರ ಬದಲು 101 ಎಂದೇ ಎಣಿಸುತ್ತ ಬಂದರು. ಇದರ ಪರಿಣಾಮವಾಗಿ ಕನಿಷ್ಕ ಶಕಾದಿ ಕ್ರಿ.ಶ. 78 ಎಂದು ಅಂಗೀಕೃತವಾಗಿದೆ.

ಭಾರತಾದ್ಯಂತ ಆಚರಣೆಯಲ್ಲಿ ಇರುವ ಇನ್ನೊಂದು ಶಕವೆಂದರೆ ಕಲಿ ಶಕ. ಕಲಿ ಯುಗಾದಿಯಲ್ಲಿ ಸೂರ್ಯ, ಚಂದ್ರ, ಬುಧ, ಶುಕ್ರ, ಕುಜ, ಗುರು, ಶನಿ ಕೇತುಗಳೆಲ್ಲ ವಿಷವತ್ಪುಣ್ಯ ಬಿಂದುವಿನಲ್ಲಿ ಕಲೆತಿದ್ದುವೆಂದು ಕಲ್ಪಿಸಿಕೊಂಡು ಆ ದಿವಸ ಯಾವುದಿರಬೇಕೆಂದು ಗಣಿಸಿ ಭಾರತೀಯ ಖಗೋಳಜ್ಞರು ಕ್ರಿ.ಪೂ. 3102ರ ಫೆಬ್ರುವರಿ 17-18 ರ ಮಧ್ಯರಾತ್ರಿ (ಉಜ್ಜಯಿನಿಯ ಕಾಲ) ಕಲಿಯುಗಾದಿ ಕ್ಷಣವಾಗಿತ್ತೆಂದು ನಿರ್ಣಯಿಸಿದ್ದಾರೆ. ಆದರೆ ವಾಸ್ತವವಾಗಿ ಅಂದು ಗ್ರಹಗಳೆಲ್ಲ ಮೇಷಾದಿ ಬಿಂದುವಿನಲ್ಲಿರಲಿಲ್ಲ. ಅದು ಹೇಗಾದರೂ ಇರಲಿ, ಗತಕಲಿವರ್ಷಗಳ ಎಣಿಕೆ ಒಂದು ಉಪಯುಕ್ತವಾದ ವ್ಯವಸ್ಥೆ ಎನ್ನುವುದರಲ್ಲಿ ಸಂಶಯವಿಲ್ಲ. ಇವೆರಡಲ್ಲದೆ ಕ್ರಿ.ಪೂ. 3177 ರಲ್ಲಿ ಆರಂಭವಾದ ಸಪ್ತರ್ಷಿ ಶಕ, ಕ್ರಿ.ಪೂ. 2449 ರಲ್ಲಿ ಆರಂಭವಾದ ಯುಧಿಷ್ಠಿರ ಶಕ, ಕ್ರಿ.ಪೂ. 545 ರಲ್ಲಿ ಆರಂಭವಾದ ಬುದ್ಧ ನಿರ್ವಾಣ ಶಕ, ಕ್ರಿ.ಪೂ. 528 ರಲ್ಲಿ ಆರಂಭವಾದ ಮಹಾವೀರ ನಿರ್ವಾಣಶಕ ಮತ್ತು ಕ್ರಿ.ಪೂ. 58 ರಲ್ಲಿ ಆರಂಭವಾದ ವಿಕ್ರಮ ಶಕ ಇವೂ ಹಲವು ಪ್ರಾಂತಗಳಲ್ಲಿ ಬಳಕೆಯಲ್ಲಿವೆ.
ಬಾರ್ಹಸ್ಪತ್ಯಮಾನ ವರ್ಷ : ಚಾಂದ್ರಮಾನ ವರ್ಷವನ್ನು ಸೌರವರ್ಷಕ್ಕೆ ಕಟ್ಟಿಹಾಕಿರುವಂತೆಯೆ ಬಾರ್ಹಸ್ಪತ್ಯಮಾನ ವರ್ಷವನ್ನು ಸೌರವರ್ಷಕ್ಕೆ ಕಟ್ಟಿಹಾಕಿರುವ ಪದ್ಧತಿಯೂ ಕೆಲವು ಪ್ರಾಂತಗಳಲ್ಲಿವೆ. ಬೃಹಸ್ಪತಿ ಗ್ರಹದ (ಗುರು) ಒಂದು ಸೂರ್ಯ ಪರಿಭ್ರಮಣೆ 4332.32 ದಿವಸಗಳಾಗುತ್ತವೆಂದು ಸೂರ್ಯಸಿದ್ಧಾಂತದ ನಿರ್ಣಯ (ಆಧುನಿಕ ನಿರ್ಣಯದ ಪ್ರಕಾರ 4332.58 ದಿವಸಗಳು). ಇದನ್ನು ಹನ್ನೆರಡರಿಂದ ಭಾಗಿಸಿದರೆ ಗುರು ಒಂದು ರಾಶಿಯಲ್ಲಿ ಕಳೆಯುವು ದಿವಸಗಳು 361.026721 ಎಂದು ತಿಳಿಯುವುದು. ಒಂದು ಸೌರವರ್ಷಕ್ಕಿಂತ ಸುಮಾರು ನಾಲ್ಕೂ ಕಾಲು ದಿವಸಗಳು ಕಡಿಮೆ ಆದ ಈ ಅವಧಿಗೆ ಬಾರ್ಹಸ್ಪತ್ಯಮಾನವರ್ಷವೆಂದು ಹೆಸರು.

ದ್ವಾದಶರಾಶಿಗಳ ಪೈಕಿ ಒಂದನ್ನು ಗುರು ಪ್ರವೇಶಿಸಿದಂದಿನಿಂದ ರಾಶಿನಾಮಕ ಬಾರ್ಹಸ್ಪತ್ಯ ವರ್ಷ ಆರಂಭಿಸುತ್ತದೆ. ಈ ದ್ವಾದಶವರ್ಷ ಚಕ್ರದ ಮೊದಲನೆಯ ವರ್ಷ ಕುಂಭರಾಶಿ ಪ್ರವೇಶದಿಂದ ಆಗುವುದು. ಇಂಥ ಐದು ಚಕ್ರಗಳು ಸೇರಿ ಪ್ರಭವಾದಿ ಸಂವತ್ಸರಚಕ್ರ ಹುಟ್ಟಿತು. ಸೌರವರ್ಷದ ಅಥವಾ ಚಾಂದ್ರಸೌರವರ್ಷದ ಆರಂಭಕ್ಕೆ ಹಿಂದೆ ಯಾವ ಬಾರ್ಹಸ್ಪತ್ಯ ವರ್ಷ ಆರಂಭವಾಯಿತೋ ಆ ವರ್ಷದ ಹೆಸರೇ ಸೌರವರ್ಷದ ಹೆಸರೂ ಆಗುತ್ತದೆ. ಒಂದು ಸೌರವರ್ಷದ ಆರಂಭದಲ್ಲಿಯೇ ಬಾರ್ಹಸ್ಪತ್ಯ ವರ್ಷ ಮೊದಲಾಗಿ ಸೌರವರ್ಷ ಮುಗಿಯುವುದರೊಗಳಗೇ ಬಾರ್ಹಸ್ಪತ್ಯ ವರ್ಷ ಮುಗಿದರೆ ಅಂಥ ವರ್ಷ ಕ್ಷಯವರ್ಷವಾಗುತ್ತದೆ. ಸೂರ್ಯ ಸಿದ್ಧಾಂತದ ಪ್ರಕಾರ 85 ಅಥವಾ 86 ಸೌರವರ್ಷಗಳಿಗೆ ಒಂದು ಸಲ ಬಾರ್ಹಸ್ಪತ್ಯ ವರ್ಷ ಕ್ಷಯವಾಗುತ್ತದೆ. ನರ್ಮದೆಯ ಉತ್ತರದಲ್ಲಿ ಈ ಪದ್ಧತಿ ಈಗಲೂ ಆಚರಣೆಯಲ್ಲಿದೆ. ದಕ್ಷಿಣ ಭಾರತದಲ್ಲಿ ಕ್ರಿ. ಶ. 10ನೆಯ ಶತಮಾನದಿಂದ ಕ್ಷಯವರ್ಷ ಪದ್ಧತಿ ನಿಂತುಹೋಗಿ ಪ್ರಭವಾದಿ ವರ್ಷಗಳನ್ನು ತಪ್ಪದೆ ಎಣಿಸುತ್ತ ಬಂದಿದೆ. ಈ ಕಾರಣದಿಂದಲೆ ಕ್ರಿ. ಶ. 1961ಕ್ಕೆ ಸರಿಯಾದ ದಕ್ಷಿಣ ಭಾರತದ ಪ್ಲವ ಸಂವತ್ಸರ (ಷಷ್ಟಿ ಚಕ್ರದಲ್ಲಿ 35ನೆಯದು) ಉತ್ತರದಲ್ಲಿ ಹದಿಮೂರು ವರ್ಷಗಳು ಮುನ್ನುಗ್ಗಿ ಆನಂದ ಸಂವತ್ಸರ (48ನೆಯದು) ಆಗಿದೆ.

	ಬಾರ್ಹಸ್ಪತ್ಯ ವರ್ಷಗಳನ್ನು ಕುಂಭಾದಿ ರಾಶಿನಾಮಗಳಿಂದ ಕರೆಯುವ ಪದ್ಧತಿಯೂ ಕೆಲವು ಕಡೆ ಇದೆ. ಈ ಎಣಿಕೆಯಲ್ಲಿ ಕಾರ್ತಿಕವರ್ಷ (ವೃಷಭ) ಮೊದಲನೆಯದು. ಅಶ್ವಿನ (ಮೇಷ) ವರ್ಷ ಹನ್ನೆರಡನೆಯದು. ಇವು ತಿಂಗಳುಗಳಿರಬಹುದೆಂಬ ಭ್ರಮೆ ನಿವಾರಣೆಗಾಗಿ ಇವನ್ನು ಮಹಾಕಾರ್ತಿಕ, ಮಹಾ ಮಾರ್ಗಶಿರ ಇತ್ಯಾದಿಯಾಗಿ ಕರೆಯುತ್ತಾರೆ. ಉದಾಹರಣೆಗೆ 1961ಕ್ಕೆ ಸರಿಯಾದ ಪ್ಲವ ಸಂವತ್ಸರದ ಮೊದಲಲ್ಲಿ ಮಹಾಷಾಢ ನಡೆಯುತ್ತಿದ್ದು ಆಮೇಲೆ ಮಹಾಶ್ರಾವಣ ಸಂವತ್ಸರ ನಡೆಯುತ್ತದೆ.

ಯೆಹೂದ್ಯರ ಪಂಚಾಂಗ : ಚಾಂದ್ರಸೌರವರ್ಷಗಳ ಕಾಲಗಣನೆ ಭಾರತವೊಂದರ ವೈಶಿಷ್ಟ್ಯವಲ್ಲ. ಬ್ಯಾಬಿಲೋನಿಯ, ಪ್ಯಾಲಸ್ಟೀನ್, ಚೀನಗಳಲ್ಲಿಯೂ ಚಾಂದ್ರ ಸೌರವರ್ಷದ ಪಂಚಾಂಗ ಬಳಕೆಯಲ್ಲಿದೆ. ಆದರೆ ಆ ದೇಶಗಳವರು ಹತ್ತೊಂಬತ್ತು ಚಕ್ರದಲ್ಲಿ ಗೊತ್ತಾದ ನಿಯಮಾನುಸಾರವಾಗಿ ಏಳು ಅಧಿಕ ಚಾಂದ್ರಮಾಸಗಳನ್ನು ಸೇರಿಸುತ್ತಾರೆ. ಉದಾಹರಣೆಗೆ ಯೆಹೂದ್ಯರ ಪಂಚಾಂಗವ್ಯವಸ್ಥೆಯಲ್ಲಿ ಪ್ರತಿ ಚಾಂದ್ರಮಾಸವೂ ಸಂಜೆಯಲ್ಲಿ ಪ್ರಥಮ ಚಂದ್ರದರ್ಶನ ದಿವಸದಿಂದ ಅಂದರೆ ಶುಕ್ಲಬಿದಿಗೆ ಅಥವಾ ಅಪರೂಪವಾಗಿ ಪಾಡ್ಯಮಿಯಿಂದ ಆರಂಭವಾತಗುತ್ತದೆ. ಅವರ ದಿವಸವೂ ಸೂರ್ಯಾಸ್ತದಿಂದ ಆರಂಭವಾಗುತ್ತದೆ. ಅವರ ವರ್ಷ ಮೊದಲು ವಸಂತ ಮಾಸವಾದ ನಿಸಾನ್‍ನಿಂದ ಆರಂಭವಾಗುತ್ತಿತ್ತು. ಆದರೆ ಕ್ರಿ.ಪೂ. ಮೊದಲನೆಯ ಶತಕದಿಂದ ಶರನ್ಮಾಸವಾ ತಿಷ್ರಿಯಿಂದ ಆರಂಭವಾಗುತ್ತದೆ. ಪ್ರತಿ 19 ವರ್ಷ ಚಕ್ರದ 3ನೆಯ, 6ನೆಯ, 8ನೆಯ, 11ನೆಯ, 14ನೆಯ, 17ನೆಯ ಮತ್ತು 19ನೆಯ ವರ್ಷಗಳಲ್ಲಿ ವರ್ಷದ 12ನೆಯ ತಿಂಗಳಾದ ಅಡಾರ್‍ಮಾಸಾನಂತರ ವೇಅಡಾರ್ ಎಂಬ ಅಧಿಕ ಮಾಸವನ್ನು ಸೇರಿಸುತ್ತಾರೆ. ಅವರ ಸಾಧಾರಣವರ್ಷದಲ್ಲಿ 353, 354 ಅಥವಾ 355 ದಿವಸಗಳಿರುತ್ತವೆ: ಅಧಿಕಮಾಸ ವರ್ಷದಲ್ಲಿ 383, 384 ಅಥವಾ 385 ದಿವಸಗಳಿರುತ್ತವೆ.

ಯೆಹೂದ್ಯರು ಸೃಷ್ಟ್ಯಾದಿಶಕವನ್ನು ಬಳಸುತ್ತಾರೆ. ಅವರ ಗಣನೆಯಂತೆ ಕ್ರಿ.ಪೂ. 3761ರ ಅಕ್ಟೋಬರ್ 7ರಂದು ಶರದ್ವಿಷುವತ್ಪುಣ್ಯಕಾಲದಲ್ಲಿ ಪ್ರಪಂಚ ಸೃಷ್ಟಿಯಾಯಿತು. ಸೃಷ್ಟಿ ಕ್ಷಣಕ್ಕೆ ಮುಂಚೆಯೆ ಶರದ್ವಿಷತ್ಪುಣ್ಯಕಾಲವಿತ್ತು.
ಇಸ್ಲಾಮ್ ಪಂಚಾಂಗ : ಶುದ್ಧ ಚಾಂದ್ರಮಾನ ಪಂಚಾಂಗ ಇಸ್ಲಾಮ್ ಧರ್ಮದ ವೈಶಿಷ್ಟ್ಯ. ಸಂಧ್ಯಾಕಾಶದಲ್ಲಿ ಪ್ರಥಮ ಚಂದ್ರದರ್ಶನ ದಿವಸದಿಂದ ಇಸ್ಲಾಮ್ ತಿಂಗಳು ಪ್ರಾರಂಭವಾಗುತ್ತದೆ. ಅವರ ತಿಂಗಳುಗಳಲ್ಲಿ 29 ಅಥವಾ 30 ದಿವಸಗಳಿರುತ್ತವೆ. ಆದರೆ ಕಾಲಗಣನೆಯ ದೃಷ್ಟಿಯಿಂದ ತಿಂಗಳುಗಳ ಅವಧಿ ಈ ಮುಂದಿನಂತೆ ನಿರ್ಣೀತವಾಗಿದೆ :
1. ಮುಹರ್ರಮ್ 30		5. ಜಮಾದಾಲ್ ಅವ್ವಲ್ 30		9. ರಮ್‍ಸಾನ್ 30
2. ಸಫಾರ್ 29			6. ಜಮಾದಾಸ್ ಸಾನಿ 29		10. ಷವ್ವಾಲ್ 29
3. ರಬೀ-ಉಲ್-		7. ರಜಬ್ 30				11. ಸೀಲ್ಕಾಡಾ 30
ಅವ್ವಲ್ 30								
4. ರಬೀ ಉಸ್‍ಸಾನಿ 29		8. ಷಾಬಾನ್ 29			12. ಸೀಲ್ಹಿಜ್ಜಾ 29 ಅಥವಾ 30
ಸಾಧಾರಣ ವರ್ಷಗಳಲ್ಲಿ ಸೀಲ್ಹಿಜ್ಜಾ ತಿಂಗಳಿಗೆ 29 ದಿವಸಗಳು, ಅಧಿಕ ದಿವಸ ವರ್ಷಗಳಲ್ಲಿ 30 ದಿವಸಗಳು. ಇಸ್ಲಾಮ್ ಪಂಚಾಂಗದ 30 ವರ್ಷಗಳ ಒಂದು ಚಕ್ರದಲ್ಲಿ 54 ದಿವಸಗಳ 19 ಸಾಧಾರಣ ವರ್ಷಗಳೂ 355 ದಿವಸಗಳ 11 ಅಧಿಕ ದಿವಸ ವರ್ಷಗಳೂ (ಕಬೀಷಾಗಳೂ) ಇವೆ. ಹಿಜಿರಾ ಶಕವರ್ಷವನ್ನು 30ರಿಂದ ಭಾಗಿಸಿದಾಗ 2, 5, 7, 10, 13, 15, 18, 21, 24, 26, ಅಥವಾ 29 ಶೇಷ ಉಳಿದರೆ ಅದು ಕಬೀಷಾ. ಇಲ್ಲದಿದ್ದರೆ ಸಾಧಾರಣ ವರ್ಷ. ಕೆಲವು ಇಸ್ಲಾಮ್ ದೇಶಗಳಲ್ಲಿ 7, 18 ಮತ್ತು 26ರ ಶೇಷಗಳ ಬದಲು 8, 19 ಮತ್ತು 27ರ ಶೇಷಗಳ ವರ್ಷಗಳು ಕಬೀಷಾಗಳಾಗಿ ಗಣನೆಯಾಗುತ್ತವೆ. ಈ ಗಣಿತಿಯಂತೆ 360 ಚಾಂದ್ರಮಾಸಗಳಿಗೆ 10,631 ದಿವಸಗಳಾಗುವುವು. ಇದು ನಿಷ್ಕøಷ್ಟವಾದ ಅವಧಿಗಿಂತ 0.012 ದಿವಸ ಅಂದರೆ ಹದಿನೇಳೂಕಾಲು ಮಿನಿಟುಗಳು ಕಡಿಮೆಯಾಗಿದೆ
.
ಇಸ್ಲಾಮ್ ಶಕ ಹಿಜಿರಾ ಕ್ರಿ. ಶ. 622ರಿಂದ ಆರಂಭವಾಗುತ್ತದೆ. ಇದು ಆಚರಣೆಗೆ ಬಂದದ್ದು ಹಿಜಿರಾ 10ರಿಂದ (ಕ್ರಿ. ಶ. 632). ಅದಕ್ಕೆ ಮುಂಚೆ ಅರೇಬಿಯಾದಲ್ಲಿಯೂ ಒಂದು ರೀತಿಯ ಚಾಂದ್ರಸೌರ ಪಂಚಾಂಗ ಬಳಕೆಯಲ್ಲಿತ್ತು. ಹಿಜಿರಾ 11ರ ಆರಂಭದಿವಸ ಕ್ರಿ. ಶ. 632ರ ಮಾರ್ಚ್ 29 ಅಂದರೆ ವಸಂತ ವಿಷುವತ್ಪುಣ್ಯ ದಿವಸದ ಮಾರನೆಯ ದಿವಸವಾಗಿತ್ತು. ಆ ತನಕ ವಸಂತದಲ್ಲಿ ಆರಂಭವಾಗುತ್ತಿದ್ದ ಅರೇಬಿಯದ ವರ್ಷ ಅಲ್ಲಿಂದೀಚೆಗೆ ವರ್ಷದ ಋತುಗಳನ್ನೆಲ್ಲ 32 1/2 ವರ್ಷಗಳಿಗೊಂದು ಸಲ ಅಪ್ರದಕ್ಷಿಣೆ ಹಾಕುವ ಇಸ್ಲಾಮ್ ವರ್ಷವಾಯಿತು.

ಪಾಶ್ಚಾತ್ಯ ಪಂಚಾಂಗ : ಈಗ ಪ್ರಪಂಚದಲ್ಲೆಲ್ಲ ಪರಿಚಿತವಾಗಿರುವ ಕ್ರಿ.ಸ್ತಶಕ ವರ್ಷ ಶುದ್ಧ ಸೌರವರ್ಷ. ಈ ಪದ್ಧತಿಯಲ್ಲಿ ಸಾಧಾರಣ ವರ್ಷಕ್ಕೆ 365 ದಿವಸಗಳೂ ಅಧಿಕದಿವಸ ವರ್ಷ 366 ದಿವಸಗಳೂ ಇವೆ. ವರ್ಷದ ಜನವರಿ, ಫೆಬ್ರುವರಿ, ಮಾರ್ಚ್, ಏಪ್ರಿಲ್, ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಅನುಕ್ರಮವಾಗಿ 31, 28, 31, 30, 31, 30, 31, 31, 30, 31, 30 ಮತ್ತು 31 ದಿವಸಗಳಿವೆ. ಅಧಿಕ ದಿವಸ ವರ್ಷದ ಫೆಬ್ರುವರಿಗೆ 29 ದಿವಸಗಳು. ವರ್ಷಸಂಖ್ಯೆ 4ರಿಂದ ಭಾಗವಾದ ವರ್ಷ ಅಧಿಕದಿವಸ ವರ್ಷ. ಆದರೆ ಶತಮಾನ ವರ್ಷ 400ರಿಂದ ಭಾಗವಾದರೆ ಮಾತ್ರ ಅಧಿಕದಿವಸ ವರ್ಷವಾಗುತ್ತದೆ. ಅಲ್ಲಿಗೆ ವರ್ಷದ ಸರಾಸರಿ ಅವಧಿ 365.2425 ದಿವಸಗಳಾಗುತ್ತವೆ. ಕಲಿಯುಗಾದಿಯನ್ನು ಗಣಿಸಿರುವಂತೆಯೆ ಕ್ರಿ. ಶ. 1ನ್ನು ಯೇಸುಕ್ರಿಸ್ತನ ಜನ್ಮವರ್ಷವೆಂದು ಕ್ರಿ. ಶ. ಸುಮಾರು 530ರಲ್ಲಿ ಕ್ರೈಸ್ತ ದೈವಜ್ಞರು ನಿರ್ಣಯಿಸಿದರು. ಈಚಿನ ಸಂಶೋಧನೆಗಳಿಂದ ಯೇಸುವಿನ ಜನ್ಮ ಕ್ರಿ. ಪೂ. 4-5ರಲ್ಲಿ ಅಗಿದ್ದಿರಬೇಕೆಂದು ತಿಳಿದುಬಂದಿದೆ. ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ಕ್ರಿಸ್ತವರ್ಷ ಮಾರ್ಚ್ ತಿಂಗಳಿಂದ ಅಂದರೆ ವಸಂತಕಾಲದಿಂದ ಆರಂಭವಾಗುತ್ತಿತ್ತು. ಸೆಪ್ಟೆಂಬರ್ (ಸಪ್ತಮ ಮಾಸ), ಅಕ್ಟೋಬರ್ (ಅಷ್ಟಮಮಾಸ), ನವೆಂಬರ್ (ನವಮಮಾಸ) ಮತ್ತು ಡಿಸೆಂಬರ್ (ದಶಮ ಮಾಸ) ಎಂಬ ಹೆಸರುಗಳೇ ಇದಕ್ಕೆ ಸಾಕ್ಷಿ. ಅನೇಕ ರಾಜಕೀಯ ಕಾರಣಗಳಿಂದ ವರ್ಷಾರಂಭ ಮಾರ್ಚಿಯಿಂದ ಜನವರಿಗೆ ಹಿಂದಕ್ಕೆ ಸಾಗಿತು. ವರ್ಷದ 365 ದಿವಸಗಳು ನೀತಿನಿಯಮಗಳಿಲ್ಲದೆ ತಿಂಗಳುಗಳಿಗೆ ಹಂಚಿಕೆಯಾಗಿರುವುದೂ ರಾಜಕೀಯ ಕಾರಣಗಳಿಗಾಗಿಯೇ. (ನೋಡಿ- ತಾರೀಕುಪಟ್ಟಿ)

ಅಹರ್ಗಣ ; ಜೂಲಿಯನ್ ದಿವಸ ಸಂಖ್ಯೆ : ನಮ್ಮ ಚಾಂದ್ರಸೌರ ಪಂಚಾಂಗದಲ್ಲಿ ಕೆಲವು ತಿಥಿಗಳು ಕ್ಷಯವಾಗುತ್ತವೆ, ಕೆಲವು ತಿಥಿಗಳು ಎರಡು ದಿವಸ ನಡೆಯುತ್ತವೆ. ಈ ಕಾರಣದಿಂದ ಹಲವು ವರ್ಷಗಳ ಅಂತರವಿರುವ ಎರಡು ದಿವಸಗಳ ಪಂಚಾಂಗ ತಿಳಿದಿದ್ದರೂ ಆ ಅವಧಿಯಲ್ಲಿ ಎಣಿಕೆಯಾಗಿರುವ ದಿವಸಗಳ ಸಂಖ್ಯೆಯನ್ನು ಗಣಿಕಸುವುದು ಸುಲಭವಲ್ಲ. ಈ ತೊಂದರೆಯ ನಿವಾರಣೆಗಾಗಿ ಭಾರತೀಯ ಖಗೋಳಜ್ಞರು ಐದನೆಯ ಶತಮಾನಕ್ಕೆ ಮುಂಚೆಯೆ ಅಹರ್ಗಣ ಅಂದರೆ ಒಂದು ನಿರ್ದಿಷ್ಟವಾದ ದಿವಸದಿಂದ ಸಂದಿರುವ ದಿವಸಗಳ ಗಣಿತಿಯನ್ನು ಮಾಡುವ ಯೋಜನೆಯನ್ನು ಹೂಡಿದರು. ಅವರೇ ಆಯ್ದ ನಿರ್ದಿಷ್ಟ ದಿವಸ ಕಲಿಯುಗಾದಿ. ನಮ್ಮ ಪಂಚಾಂಗಗಳಲ್ಲಿ ಈಗಲೂ ಗತ ಕಲಿದಿವಸಗಳನ್ನು ತಿಳಿಸುತ್ತಾರೆ. ಉದಾಹರಣೆಗೆ ಶಕವರ್ಷ 1883ರ ಪ್ರಥಮ ದಿವಸಕ್ಕೆ (1961ರ ಮಾರ್ಚ್ 22-23ರ ಮಧ್ಯ ರಾತ್ರಿಗೆ) ಸಂದ ಗತಕಲಿದಿವಸಗಳು 18,48,91, ಗತಕಲಿವರ್ಷಗಳು ,062.

ಪಾಶ್ಚಾತ್ಯರಲ್ಲಿ ಇಂಥ ಪದ್ಧತಿಯನ್ನು ಆಚರಣೆಗೆ ತಂದವ ಫ್ರೆಂಚ್ ವಿದ್ವಾಂಸ ಜೋಸೆಫ್ ಸ್ಕೇಲಿಗರ್. ಈತ ಕ್ರಿ. ಪೂ. 4713ರ ಜನವರಿ 1ರಿಂದ ದಿವಸಗಳನ್ನು ಎಣಿಸುವ ಪದ್ಧತಿಯನ್ನು ಅಚರಣೆಗೆ ತಂದು ಆ ದಿವಸಗಳನ್ನು ತನ್ನ ತಂದೆ ಜೂಲಿಯಸ್ ಸ್ಕೇಲಿಗರನ ಗೌರವಾರ್ಥವಾಗಿ ಜೂಲಿಯನ್ ದಿವಸಸಂಖ್ಯೆ ಎಂದು ಕರೆದ. ಕಲಿಯುಗಾದಿ ಕ್ರಿ. ಪೂ. 3102ರ ಫೆಬ್ರವರಿ 17ರ ಜೂಲಿಯನ್ ದಿವಸಸಂಖ್ಯೆ 5,88,46. ಆದ್ದರಿಂದ ಶಕವರ್ಷ 1883ರ ಚೈತ್ರ 1ರ ಜೂಲಿಯನ್ ಸಂಖ್ಯೆ 24,37,381. ಜೂಲಿಯನ್ ದಿವಸ ಮಧ್ಯಾಹ್ನದಿಂದ ಆರಂಭವಾಗುತ್ತದೆ. ಕಲಿದಿವಸ ಮಧ್ಯರಾತ್ರಿಯಿಂದ ಆರಂಭವಾಗುತ್ತದೆ. ಆದಕಾರಣ 1883ರ ಚೈತ್ರಾದಿ ಮಧ್ಯಾಹ್ನಕ್ಕೆ ಸಂದ ಜೂಲಿಯನ್ ದಿವಸಗಳು 24,37,381 ಮತ್ತು ಆ ದಿವಸಾಂತ್ಯದ ಮಧ್ಯರಾತ್ರಿಗೆ ಸಂದ ಕಲಿ ಅಹರ್ಗಣಗಳು 18,48,916.

ನಕ್ಷತ್ರ ಪುಂಜಗಳಿಗೆ ಭಾರತೀಯ ಹೆಸರುಗಳು : ಚಂದ್ರ, ಸೂರ್ಯ, ಬುಧ, ಮಂಗಳ, ಗುರು ಮತ್ತು ಶನಿ ಎಂಬ ಕಾಯಗಳು ಆಕಾಶದ ಸ್ಥಿರ ನಕ್ಷತ್ರ ಚಿತ್ರಗಳ ಪರದೆಯ ಮೇಲೆ ಭೂಮಿಯ ಸುತ್ತ ಪರಿಭ್ರಮಿಸುವಂತೆ ಭಾಸವಾಗುವ ಸೀಮಿತ ಪಟ್ಟಿಗೆ ರಾಶಿಚಕ್ರವೆಂದು (ಝೋಡಿಯಕ್) ಹೆಸರು. ಇದರ ಮೇಲಿರುವ ದ್ವಾದಶ ನಕ್ಷತ್ರಪುಂಜಗಳಿಗೆ ರಾಶಿಗಳೆಂಬ ವಿಶೇಷ ಹೆಸರುಂಟು. ಇವೇ ಮೇಷದಿಂದ ತೊಡಗಿ ಮೀನದವರೆಗಿನ ಹನ್ನೆರಡು ಸೌರಗ್ರಹಗಳು ಅಂದರೆ ಸೂರ್ಯನ ಮನೆಗಳು. ರಾಶಿಚಕ್ರವನ್ನು ಸಮಭಾಗಿಸುವ ಮಹಾವೃತ್ತವೇ ಕ್ರಾಂತಿವೃತ್ತ (ಎಕ್ಲಿಪ್ಟಿಕ್). ನಿರ್ದಿಷ್ಟವಾಗಿ, ಭೂಮಿಯ ಸುತ್ತ ಸೂರ್ಯನ ತೋರ್ಕೆ ಕಕ್ಷಾತಲ ಖಗೋಳವನ್ನು ಛೇದಿಸುವ ಮಹಾ ವೃತ್ತವಿದು.
ಹೆಚ್ಚಿನ ವಿವರಗಳಿಗೆ-

(ನೋಡಿ- ಕ್ರಾಂತಿ-ವೃತ್ತ)
(ನೋಡಿ- ನಕ್ಷತ್ರ-ಪುಂಜ)

ಮುಂದಿನ ಯಾದಿಯಲ್ಲಿ ನಕ್ಷತ್ರ ಪುಂಜಗಳ ಭಾರತೀಯ ಹಾಗೂ ಸಂವಾದಿ ಅಂತಾರಾಷ್ಟ್ರೀಯ ನಾಮಧೇಯಗಳನ್ನು ಕೊಟ್ಟಿದೆ.
1 ಕ್ರಾಂತಿವೃತ್ತೋತ್ತರ ನಕ್ಷತ್ರಪುಂಜಗಳು
1. ಉತ್ತರ ಕಿರೀಟ		... 		ಕರೋನ ಬೋರೀಯಾಲಿಸ್
2. ಉರಗಧರ			... 		ಆಫೀಯೂಕಸ್
3. ಕಾಳಭೈರವ			...		ಕೇನಿಸ್ ವಿನಾಟಿಸೀ
4. ಕಿಶೋರ			...		ಇಕ್ವೂಲೀಯಸ್
5. ಕುಂತೀ			...		ಕೆಸೀಯೋಪಿಯ
6. ಕೃಷ್ಣವೇಣೀ			... 		ಕೋಮ ಬೆರಿನೀಸಿಜ್
7. ಗುರುಡ			...		ಆ್ಯಕ್ವಿಲ
8. ತ್ರಿಕೋಣೀ			...		ಟ್ರಯ್ಯಾಂಗುಲಮ್
9. ದೀರ್ಘಕಂಠ			...		ಕಮೆಲಪಾರ್ಡಸ್
10. ದ್ರೌಪದೀ			...		ಆ್ಯಂಡ್ರೊಮಿಡ
11. ಧನಿಷ್ಠಾ			... 		ಡೆಲ್ಛೈನಸ್
12. ನಕುಲ			...		ಪೆಗಸಸ್
13. ಪಾರ್ಥ			...		ಪರ್ಸಿಯಸ್
14. ಭೀಮ			...		ಹಕ್ರ್ಯುಕಲಿಸ್
15. ಮಾರ್ಜಾಲ			...		ಲಿಂಕ್ಸ್
16. ಮುಸಲೀ			...		ಲಸರ್ಟ
17. ಯುದಿಷ್ಠಿರ			...		ಸೀಫೀಯಸ್
18. ರಾಜಹಂಸ			...		ಸಿಗ್ನಸ್
19. ಲಘು ಸಪ್ತರ್ಷಿ		...		ಅರ್ಸ ಮೈನರ್
20. ಲಘು ಸಿಂಹ			...		ಲೀಯೊ ಮೈನರ್
21. ವಿಜಯ ಸಾರಥಿ		...		ಆರೀಗ
22. ವೀಣಾ			...		ಲೈರ
23. ಶರ				...		ಸಜಿಟ
24. ಶೃಗಾಲ			...		ವಲ್‍ಪೆಕ್ಯುಲ
25. ಸಪ್ತರ್ಷಿಮಂಡಲ		...		ಅರ್ಸ ಮೇಜರ್
26. ಸರ್ಪ			...		ಸರ್ಪೆನ್ಜ್
27. ಸಹದೇವ			...		ಬೂಟೀಸ್
28. ಸುಯೋಧನ			...		ಡ್ರೇಕೋ
2. ಕ್ರಾಂತಿವೃತ್ತರಾಶಿಗಳು
1. ಕನ್ಯಾ				...		ವರ್ಗೋ
2. ಕಟಕ				...		ಕ್ಯಾನ್ಸರ್
3. ಕುಂಭ			...		ಅಕ್ವೆರಿಯಸ್
4. ತುಲಾ			...		ಲೈಬ್ರ
5. ಧನುಸ್			...		ಸಜಿಟ್ಟೇರಿಯಸ್
6. ಮಕರ			...		ಕ್ಯಾಪ್ರಿಕಾರ್ನಸ್
7. ಮಿಥುನ			...		ಜೆಮಿನಿ
8. ಮೀನ			...		ಪಿಸೀಸ್
9. ಮೇಷ			...		ಏರೀಸ್
10. ವೃಶ್ಚಿಕ			...		ಸ್ಕಾರ್ಪಿಯಸ್
11. ವೃಷಭ			...		ಟಾರಸ್
12. ಸಿಂಹ			...		ಲೀಯೊ
3. ಕ್ರಾಂತಿವೃತ್ತದಕ್ಷಿಣ ನಕ್ಷತ್ರ ಪುಂಜಗಳು
1. ಅಗ್ನಿಕುಂಡ			...		ಫಾರ್ನಾಕ್ಸ್
2. ಅಜಗರ			...		ಹೈಡ್ರ
3. ಅಷ್ಟಕ			...		ಆಕ್ಟೇನ್ಜ್
4. ಏಕಶೃಂಗೀ			...		ಮೆನೊಸಿರಸ್
5. ಕಂದರ			...		ಕ್ರೇಟರ್
6. ಕಪೋತ			...		ಕೊಲಂಬ
7. ಕಾಳಿಂಗ			...		ಹೈಡ್ರಸ್
8. ಕಿನ್ನರ				...		ಸೆಂಟಾರಸ್
9. ಖೇಟಕ			...		ಸ್ಕೂಟಮ್
10. ಚಂಚಲವರ್ಣಿಕಾ		...		ಕ್ಯಮೀಲೀಯನ್
11. ಚಕೋರ			...		ಫೀನೀಕ್ಸ್
12. ಚತುಷ್ಕ			...		ನಾರ್ಮ
13. ಚಿತ್ರಫಲಕ			...		ಪಿಕ್ಟರ್
14. ಜಾಲ			...		ರಿಟಿಕ್ಯುಲಮ್
15. ತಿಮಿಂಗಲ			...		ಸೀಟಸ್
16. ತ್ರಿಶಂಕು			...		ಕ್ರಕ್ಸ್
17. ದಕ್ಷಿಣ ಕಿರೀಟ		...		ಕರೋನ ಆಸ್ಟೇಲಿಸ್
18. ದಕ್ಷಿಣ ತ್ರಿಕೋಣಿ		...		ಟ್ರಯ್ಯಾಂಗುಲಮ್ ಆಸ್ಟೇಲೀ
19. ದಕ್ಷಿಣ ಮೀನ		...		ಪೈಸೀಜ್ ಆಸ್ಟ್ರೆನಸ್
20. ದಿಕ್ಸೂಚೀ			...		ಪಿಕ್ಸಿಸ್
21. ದೂರದರ್ಶಿನಿ		...		ಟೆಲಿಸ್ಕೋಪೀಯಮ್
22. ದೇವನೌಕಾ			...		ಕರೀನ
23. ದೇವವಿಹಗ			...		ಏಪಸ್
24. ನೌಕ್ಪಾಪಟ			...		ವೀಲ
25. ನೌಕಾಪೃಷ್ಠ			...		ಪಪ್ಪಿಸ್
26. ಬಕ				...		ಗ್ರಸ್
27. ಮತ್ಸ್ಯ			...		ಡರಾಡೋ
28. ಮಯೂರ			...		ಪೇವೋ
29. ಮಶಕ			...		ಮಸ್ಕ
30. ಮಹಾವ್ಯಾಧ			...		ಓರೈಯನ್
31. ಮಹಾಶ್ವಾನ			...		ಕ್ಯಾನೀಸ್ ಮೇಜರ್
32. ರೇಚಕ			...		ಆ್ಯಂಟ್ಲೀಯ
33. ಲಘುಶ್ವಾನ			...		ಕ್ಯಾನಿಸ್ ಮೈನರ್
34. ವೃಕ			...		ಲೂಪಸ್
35. ವೃತ್ತಿನೀ			...		ಸರ್ಸಿನಸ್
36. ವೇದಿಕಾ			...		ಏರ
37. ವೈತರಣೀ			...		ಇರಿಡನಸ್
38. ವ್ರಶ್ಚನ			...		ಸೀಲಮ್
39. ಶಫರೀ			...		ವೋಲ್ಯಾಂಜ್
40. ಶಶ				...		ಲೀಪಸ್
41. ಶಿಲ್ಪಶಾಲಾ			...		ಸ್ಕಲ್‍ಪ್ಪರ್
42. ಶ್ಯೇನ			...		ಟೂಕಾನ
43. ಷಷ್ಠಕ			...		ಸೆಕ್ಸ್‍ಟನ್ಜ್
44. ಸಾನು			...		ಮೆನ್‍ಸ
45. ಸಿಂಧೂ			...		ಇಂಡಸ್
46. ಸೂಕ್ಷ್ಮದರ್ಶಿನಿ		...		ಮೈಕ್ರೊಸ್ಕೋಪೀಯಮ್
47. ಹಸ್ತಾ			...		ಕಾರ್ವಸ್
48. ಹೋರಾಸೂಚೀ		...		ಹಾರಲೋಜೀಯಮ್
ಸಾರಾಂಶ
ಕ್ರಾಂತಿವೃತ್ತೋತ್ತರ ನಕ್ಷತ್ರಪುಂಜಗಳು			...	28
ಕ್ರಾಂತಿವೃತ್ತ ರಾಶಿಗಳು				...	12
ಕ್ರಾಂತಿವೃತ್ತದಕ್ಷಿಣ ನಕ್ಷತ್ರ ಪುಂಜಗಳು			...	48
ಮೊತ್ತ	88
(ಆರ್.ಎಲ್.ಎನ್.)
ಹಿಂದೂ ಧರ್ಮೀಯರ ಪಂಚಾಂಗ ಪದ್ಧತಿ : ಹಿಂದೂಧರ್ಮಕ್ಕೆ ಆಧಾರಗಳಾದ ವೇದ, ಸ್ಮøತಿ, ಪುರಾಣ ಮತ್ತು ಆಗಮಗಳಲ್ಲಿ ವಿಧಿಸಿರುವಂತೆ ಕರ್ಮಗಳನ್ನು ಆಚರಿಸುವುದರಿಂದ ಶ್ರೇಯಸ್ಸು ಉಂಟಾಗುತ್ತದೆ ಎಂಬುದಾಗಿ ಪ್ರತಿಯೊಬ್ಬ ಹಿಂದುವೂ ನಂಬಿರುವನು. ಈ ಧರ್ಮ ಹಿಂದುಗಳ ದೈನಂದಿನ ಆಚರಣೆಯ ಕರ್ಮಗಳಲ್ಲಿ ರೂಪುಗೊಂಡಿದೆ. ಇವನ್ನು ಆಚರಿಸಲು ಮುಖ್ಯವಾಗಿ ಇರಬೇಕಾದ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎಂಬ ಐದು ಅಂಗಗಳ ಸಮುದಾಯವೇ ಪಂಚಾಂಗ. ಸೂರ್ಯ-ಚಂದ್ರರ ಗತಿಯಿಂದಾಗಿ ಈ ಆಂಗಗಳು ಪ್ರತಿದಿವಸವೂ ಬದಲಾಗುತ್ತವೆ. ಇವನ್ನು ಅಂದಂದಿನ ಸೂರ್ಯಚಂದ್ರರ ಇರುವಿಕೆಯಿಂದ ಗಣಿಸಿ ತಿಳಿಯ ಬೇಕಾಗುವುದು. ದೈನಂದಿನ ಗ್ರಹಸ್ಥಿತಿಯನ್ನು ಗಣಿಸಿ ಅದರಿಂದ ಒಂದು ವರ್ಷಕಾಲದವರೆಗಿನ ಪ್ರತಿನಿತ್ಯದ ಕರ್ಮಾಚರಣೆಯ ಕಾಲದ ವಿವರವನ್ನು ಕರ್ಮಾನುಷ್ಠಾತೃಗಳಿಗೆ ತಿಳಿಯಪಡಿಸಲು ಪ್ರತಿನಾಡಿನಲ್ಲೂ ಪ್ರಕಟವಾಗುವ ಪುಸ್ತಕಕ್ಕೆ ಪಂಚಾಂಗವೆಂದು ಹೆಸರು. ಜ್ಯೋತಿಷ ಮತ್ತು ಧರ್ಮಶಾಸ್ತ್ರಗಳಲ್ಲಿ ನಿಷ್ಣಾತರು ಇವನ್ನು ಗಣಿಸಿ ಪ್ರಕಟಿಸುತ್ತಾರೆ. ಪಂಚಾಂಗದಲ್ಲಿ ವರ್ಷ, ಅಯನ, ಋತು, ಮಾಸ, ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಗ್ರಹಗಳ ಸ್ಥಿತಿ, ಗ್ರಹಣಗಳು ಮತ್ತು ಅವುಗಳಿಂದ ಆ ವರ್ಷದಲ್ಲಿ ಉಂಟಾಗುವ ಫಲಗಳು ಇವುಗಳ ವಿವರ ಇರುವುದು.

ವರ್ಷ : ಹಿಂದುಗಳು ಒಂದೊಂದು ವರ್ಷವನ್ನು ಒಂದೊಂದು ಹೆಸರಿನಿಂದ ಅಂಕಿತಮಾಡಿ ಕರೆಯುತ್ತಾರೆ. (ಓದುವ ಕ್ರಮ : ಮೇಲಿನಿಂದ ಕೆಳಕ್ಕೆ)
ಪ್ರಭವ		ಪ್ರಮಾಥಿ		ಖರ		ಶೋಭಕೃತ್	ರಾಕ್ಷಸ
ವಿಭವ		ವಿಕ್ರಮ		ನಂದನ		ಕ್ರೋಧಿ		ನಳ
ಶುಕ್ಲ		ವೃಷ		ವಿಜಯ		ವಿಶ್ವಾವಸು	ಪೈಂಗಳ
ಪ್ರಮೋದ	ಚಿತ್ರಭಾನು	ಜಯ		ಪರಾಭವ	ಕಾಳಾಯುಕ್ತಿ
ಪ್ರಜೋತ್ಪತ್ತಿ	ಸ್ವಭಾನು		ಮನ್ಮಥ		ಪ್ಲವಂಗ		ಸಿದ್ಧಾರ್ಥಿ
ಆಂಗಿರಸ	ತಾರಣ	ದುರ್ಮುಖಿ	ಕೀಲಕ		ರೌದ್ರಿ
ಶ್ರೀಮುಖ	ಪಾರ್ಥಿವ	ಹೇವಿಳಂಬಿ	ಸೌಮ್ಯ		ದುರ್ಮತಿ
ಭಾವ		ವ್ಯಯ		ವಿಳಂಬಿ		ಸಾಧಾರಣ	ದುಂದುಭಿ
ಯುವ		ಸರ್ವಜಿತ್	ವಿಕಾರಿ		ವಿರೋಧಿಕೃತ್	ರುಧಿರೋದ್ಗಾರಿ
ಧಾತು		ಸರ್ವಧಾರಿ	ಶಾರ್ವರಿ		ಪರೀಧಾವಿ	ರಕ್ತಾಕ್ಷಿ
ಈಶ್ವರಿ		ವಿರೋಧಿ	ಪ್ಲವ		ಪ್ರಮಾದಿ		ಕ್ರೋಧನ
ಬಹುಧಾನ್ಯ	ವಿಕೃತಿ		ಶುಭಕೃತ್	ಆನಂದ		ಅಕ್ಷಯ
ಇವು ಅರುವತ್ತು ವರ್ಷಗಳ ಹೆಸರುಗಳು, ಇದೇ ಕ್ರಮದಲ್ಲಿ ಪುನರಾವರ್ತಿಸುತ್ತವೆ. ನಾರದ ಮಹರ್ಷಿಯ ಮಕ್ಕಳೇ ಈ ಅರುವತ್ತು ವರ್ಷಗಳೆಂದು (ಸಂವತ್ಸರ) ಪುರಾಣಗಳಲ್ಲಿದೆ.
ವರ್ಷಗಣನೆಯಲ್ಲಿ ಚಾಂದ್ರ, ಸೌರ, ಬಾರ್ಹಸ್ಪತ್ಯ ವಿಧಾನಗಳು ಹೆಚ್ಚು ಬಳಕೆಯಲ್ಲಿವೆ. ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಚಾಂದ್ರವರ್ಷವೂ ತಮಿಳುನಾಡಿನಲ್ಲಿ ಸೌರವರ್ಷವೂ ವಿಂಧ್ಯಪರ್ವತದ ಉತ್ತರದಲ್ಲಿರುವ ದೇಶಗಳಲ್ಲಿ ಬಾರ್ಹಸ್ಪತ್ಯವರ್ಷವೂ ಗಣನೆಯಲ್ಲಿವೆ. ಕಲಿಯುಗದ ಆದಿಯಿಂದ ವರ್ಷಸಂಖ್ಯೆಯನ್ನು ಎಣಿಸುವುದು ಎಲ್ಲ ಕಡೆಗಳಲ್ಲೂ ರೂಢಿಯಲ್ಲಿದೆ. ಇವಲ್ಲದೆ ಕೆಲವು ಪ್ರಸಿದ್ದರಾದ ಮಹಾರಾಜರುಗಳಿದ್ದ ಕಾಲಗಳಿಂದ ವರ್ಷಗಣನೆಯೂ ರೂಢಿಯಲ್ಲಿದೆ. ಇದೇ ಶಕವರ್ಷಗಳು. ಇವುಗಳಲ್ಲಿ ಒಂದೊಂದು ನಾಡಿನಲ್ಲಿ ಒಂದೊಂದು ಶಕವರ್ಷ ಗಣನೆ ಪ್ರಚಾರದಲ್ಲಿದೆ. ಉತ್ತರ ಹಿಂದೂಸ್ಥಾನದಲ್ಲಿ ವಿಕ್ರಮಶಕವೂ ಕೇರಳದಲ್ಲಿ ಕೊಲ್ಲಮ್ ವರ್ಷವೂ ದಕ್ಷಿಣಭಾರತದ ಉಳಿದ ದೇಶಗಳಲ್ಲಿ ಶಾಲಿವಾಹನ ಶಕವೂ ವರ್ಷಸಂಖ್ಯಾ ಗಣನೆಯಲ್ಲಿ ಹೆಚ್ಚು ಪ್ರಚಾರದಲ್ಲಿವೆ.

	ಕ್ರಿಸ್ತಶಕ ವರ್ಷದ ಸಂಖ್ಯೆಗೆ 58 ನ್ನು ಸೇರಿಸಿದರೆ ವಿಕ್ರಮ ಶಕವರ್ಷಗಳೂ 3102ನ್ನು ಸೇರಿಸಿದರೆ ಕಲಿವರ್ಷಗಳೂ ಕ್ರಿ.ಶ. ವರ್ಷದ ಸಂಖ್ಯೆಯಿಂದ 78ನ್ನು ಕಳೆದರೆ ಗತಶಾಲಿವಾಹನ ಶಕವರ್ಷಗಳೂ 825ನ್ನು ಕಳೆದರೆ ಕೊಲ್ಲಮ್ ವರ್ಷಗಳೂ ಬರುತ್ತವೆ.

	ಪಂಚಾಂಗಗಣನಾಕ್ರಮದಲ್ಲಿ ಸಿದ್ಧಾಂತ, ವಾಕ್ಯ, ದೃಗ್ಗಣಿತ ಎಂದು ಮುಖ್ಯವಾಗಿ ಮೂರು ಕ್ರಮಗಳಿವೆ. ಕರ್ನಾಟಕದಲ್ಲಿ ಸಿದ್ಧಾಂತ ಮತ್ತು ದೃಗ್ಗಣಿತ ಪಂಚಾಂಗಗಳೂ ತಮಿಳುನಾಡಿನಲ್ಲಿ ವಾಕ್ಯ ಪಂಚಾಂಗವೂ ವಿಶೇಷವಾಗಿ ಬಳಕೆಯಲ್ಲಿವೆ. 1957ರಿಂದ ಭಾರತ ಸರ್ಕಾರ ಭಾರತೀಯ ಪಂಚಾಂಗವೆಂಬ ದೃಗ್ಗಣಿತ ಪಂಚಾಂಗವನ್ನು ಪ್ರತಿವರ್ಷವೂ ಪ್ರಕಟಿಸುತ್ತಿದೆ.
ವರ್ಷ ಪ್ರಾರಂಭವಾಗುವ ಕಾಲ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಕ್ರಮದಲ್ಲಿದೆ. ಶುಕ್ಲ ಪಕ್ಷಾದಿ ಮಾಸಗಣನೆಯ ಪದ್ಧತಿಯಂತೆ ಚೈತ್ರಶುಕ್ಲ ಪಾಡ್ಯದ ದಿವಸವೂ ಕೃಷ್ಣಪಕ್ಷಾದಿ ಮಾಸಗಣನೆ ಮಾಡುವ ಪದ್ಧತಿಯಂತೆ ಫಾಲ್ಗುಣ ಕೃಷ್ಣ ಪ್ರಥಮೆಯ ದಿವಸವೂ ಚಾಂದ್ರಸಂವತ್ಸರ ಪ್ರಾರಂಭವಾಗುತ್ತದೆ. ಅಧಿಕಮಾಸ ಬರುವ ವರ್ಷಗಳಲ್ಲಿ 384 ದಿವಸಗಳೂ ಉಳಿದ ವರ್ಷಗಳಲ್ಲಿ 354 ದಿವಸಗಳೂ ಚಾಂದ್ರಸಂವತ್ಸರದ ದಿವಸಸಂಖ್ಯೆಯ ಪರಿಮಾಣ. ಉತ್ತರದೇಶದ ನಿವಾಸಿಗಳಲ್ಲಿ ಬಹುಮಂದಿಗೆ ಕಾರ್ತಿಕ ಶುಕ್ಲಪ್ರಥಮೆಯ ದಿವಸ ವರ್ಷ ಪ್ರಾರಂಭವಾಗುತ್ತದೆ. ಭಾರತೀಯ ಪಂಚಾಂಗದಂತೆ ನಿಯತವಾಗಿ ಮಾರ್ಚಿ ತಿಂಗಳಿನ 22ನೆಯ ತಾರೀಕಿನ ದಿವಸವೂ ಅಧಿಕ ವರ್ಷಗಳಲ್ಲಿ 21ನೆಯ ತಾರೀಕಿನ ದಿವಸವೂ ವರ್ಷಗಣನೆ ಪ್ರಾರಂಭವಾಗುತ್ತದೆ. ಸೂರ್ಯ ನಿರಯನ ಮೇಷರಾಶಿಯನ್ನು ಪ್ರವೇಶಿಸುವ ದಿವಸದಿಂದ ಸೌರವರ್ಷಗಣನೆಗೆ ಪ್ರಾರಂಭ. ಸೌರ ಮತ್ತು ಭಾರತೀಯ ಪಂಚಾಂಗಗಳ ಗಣನೆಯಂತೆ ವರ್ಷದಲ್ಲಿ 366 ದಿವಸಗಳಿರುತ್ತವೆ. ನಾಲ್ಕು ವರ್ಷಗಳಿಗೊಮ್ಮೆ 366 ದಿವಸಗಳಾಗುತ್ತವೆ.
ಋತು : ಒಂದು ವರ್ಷದಲ್ಲಿ ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಎಂಬ ಆರು ಋತುಗಳಿವೆ. ಚಾಂದ್ರಮಾನದಂತೆ ಚೈತ್ರ ಶುಕ್ಲ ಪ್ರಥಮೆಯಿಂದಲೂ ಸೌರಗಣನೆಯಂದೆ ಮೇಷ ಸಂಕ್ರಮಣದ ದಿವಸದಿಂದಲೂ ವಸಂತ ಋತು ಪ್ರಾರಂಭವಾಗಿ ಎರಡೆರಡು ತಿಂಗಳುಗಳಿಗೆ ಒಂದೊಂದು ಋತುವಿನಂತೆ ಅನುಕ್ರಮವಾಗಿ ಆರು ಋತುಗಳೂ ಬರುತ್ತವೆ.
ಮಾಸ : ಚಾಂದ್ರ, ಸೌರ ಎಂದು ಮಾಸಗಳು ಎರಡು ವಿಧ. ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ (ಆಗ್ರಹಾಯನ), ಪುಷ್ಯ, ಮಾಘ, ಫಾಲ್ಗುಣ ಇವು ಹನ್ನೆರಡು ಚಾಂದ್ರಮಾಸಗಳು. ಮೇಷ, ವೃಷಭ, ಮಿಥುನ, ಕರ್ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ, ಮೀನ ಇವು ಹನ್ನೆರಡು ಸೌರಮಾಸಗಳು. ದರ್ಶಾಂತ, ಪೂರ್ಣಿಮಾಂತ ಎಂದು ಚಾಂದ್ರಮಾಸದಲ್ಲಿ ಎರಡು ವಿಧಗಳಿವೆ. ಶುಕ್ಲ ಪ್ರಥಮಾತಿಥಿಯಿಂದ ಪ್ರಾರಂಭವಾಗಿ ಅಮಾವಾಸ್ಯೆಗೆ ಮುಗಿಯುವುದು ದರ್ಶಾಂತ ಮಾಸ. ಮೇಷದಿಂದ ಪ್ರಾರಂಭಿಸಿ ಮೀನಾಂತ್ಯದ ತನಕ ಒಟ್ಟು 12 ರಾಶಿಗಳಿವೆ. ಒಂದು ರಾಶಿಪ್ರಮಾಣ 30 ಅಂಶಗಳು. ಒಂದೊಂದು ರಾಶಿಯಲ್ಲೂ ಸೂರ್ಯ ಸಂಚರಿಸುವ ಕಾಲವೇ ಸೌರಮಾನ. ರಾಶಿಯನ್ನು ಪ್ರವೇಶಮಾಡುವ (ಸಂಕ್ರಮಣ) ದಿವಸದಿಂದ ಅ ರಾಶಿಯ ಹೆಸರಿನ ಸೌರಮಾಸ ಪ್ರಾರಂಭವಾಗುತ್ತದೆ. ಈ ಎರಡು ವಿಧ ಮಾಸಗಣನೆಯಲ್ಲದೆ ಭಾರತೀಯ ಪಂಚಾಂಗದಂತೆ ಮತ್ತೊಂದು ವಿಧದ ಮಾಸ ಗಣನೆಯೂ ಇದೆ. ಮಾರ್ಚಿ 22 (ಅಧಿಕ ವರ್ಷಗಳಲ್ಲಿ 21), ಏಪ್ರಿಲ್ 21, ಮೇ 22, ಜೂನ್ 22, ಜುಲೈ 23, ಆಗಸ್ಟ್ 23, ಸೆಪ್ಟಂಬರ್ 23, ಅಕ್ಟೋಬರ್ 23, ನವಂಬರ್ 22, ಡಿಸಂಬರ್ 22, ಜನವರಿ 21, ಫೆಬ್ರುವರಿ 20 ಈ ತಾರೀಕುಗಳಲ್ಲಿ ಅನುಕ್ರಮವಾಗಿ ಚೈತ್ರಾದಿ ಹನ್ನೆರಡು ತಿಂಗಳುಗಳು ನಿಯತವಾಗಿ ಪ್ರಾರಂಭವಾಗುತ್ತವೆ.
ಎರಡು ಅಮಾವಾಸ್ಯೆಗಳ ಮಧ್ಯದಲ್ಲಿ ಸೂರ್ಯ ಮತ್ತೊಂದು ರಾಶಿಯನ್ನು ಪ್ರವೇಶಿಸದಿದ್ದರೆ (ಸಂಕ್ರಮಣವಿಲ್ಲದಿದ್ದರೆ) ಅದನ್ನು ಚಾಂದ್ರಮಾನದಲ್ಲಿ ಅಧಿಕಮಾಸ ಎಂದು ಕರೆಯುತ್ತಾರೆ. ಈ ವಿಧವಾದ ಮಾಸ 29 ರಿಂದ 35 ತಿಂಗಳುಗಳೊಳಗೆ ಒಂದಾವರ್ತಿ ಬರುತ್ತದೆ. ಅಧಿಕಮಾಸ ಬರುವ ವರ್ಷದಲ್ಲಿ ಒಂದೇ ಹೆಸರಿನ ಎರಡು ಚಾಂದ್ರಮಾಸಗಳು ಇರುವುದರಿಂದ ಒಟ್ಟು 13 ಚಾಂದ್ರಮಾಸಗಳಾಗುತ್ತವೆ.

ಎರಡು ಅಮಾವಾಸ್ಯೆಗಳ ಮಧ್ಯದಲ್ಲಿ ಎರಡು ಸೂರ್ಯಸಂಕ್ರಮಣಗಳು ಬಂದರೆ ಆ ಅವಧಿಯನ್ನು ಕ್ಷಯಮಾಸವೆಂದು ಕರೆಯುತ್ತಾರೆ. ಕ್ಷಯಮಾಸ 19 ವರ್ಷಗಳಿಗೊಮ್ಮೆ ಅಥವಾ 141 ವರ್ಷಗಳಿಗೊಮ್ಮೆ ಬರುತ್ತದೆ. ಇದು ಕಾರ್ತಿಕ ಮಾರ್ಗಶಿರ ಪುಷ್ಯ ಈ ಮೂರು ಮಾಸಗಳಲ್ಲಿ ಮಾತ್ರ ಸಂಭವಿಸುತ್ತದೆ. ಕ್ಷಯ ಮಾಸ ಬರುವ ವರ್ಷದಲ್ಲಿ ಕ್ಷಯಮಾಸಕ್ಕೆ ಮೊದಲು ಒಂದು ಅಧಿಕ ಮಾಸವೂ ಅನಂತರ ಇನ್ನೂಂದು ಅಧಿಕಮಾಸವೂ ಬರುತ್ತವೆ. ಅಧಿಕ ಮತ್ತು ಕ್ಷಯಮಾಸಗಳನ್ನು ಮಲಮಾಸವೆಂದು ಕರೆಯುತ್ತಾರೆ. ಈ ಮಾಸಗಳಲ್ಲಿ ಯಾವ ವಿಶೇಷ ಕರ್ಮಗಳನ್ನೂ ಮಾಡುವುದಿಲ್ಲ.

ಪಕ್ಷ, ತಿಥಿ : ಶುಕ್ಲ, ಕೃಷ್ಣ ಎಂಬ ಎರಡು ಪಕ್ಷಗಳಿವೆ. ಪ್ರಥಮಾ ತಿಥಿಯಿಂದ ಪಕ್ಷ ಪ್ರಾರಂಭವಾಗುತ್ತದೆ. ಚಂದ್ರನ ಒಂದೊಂದು ಕಲೆಯೇ ಒಂದೊಂದು ತಿಥಿ. ಶುಕ್ಲಪಕ್ಷದ ಆದಿಯಿಂದ ಅನುಕ್ರಮವಾಗಿ ಒಂದೊಂದು ತಿಥಿಗೆ ಒಂದೊಂದು ಕಲೆಯಂತೆ ಚಂದ್ರನಲ್ಲಿ ಶೌಕ್ಲ್ಯವೃದ್ಧಿಯಾಗಿ ಹುಣ್ಣಿಮೆಯ ದಿವಸ ಚಂದ್ರ ಪೂರ್ಣ ಬೆಳಗುತ್ತದೆ. ಅದರ ಮರುದಿನದಿಂದ ಚಂದ್ರನಲ್ಲಿ ಒಂದೊಂದು ತಿಥಿಗೆ ಒಂದೊಂದು ಕಲೆಯಂತೆ ಶೌಕ್ಲ್ಯ ಕುಂದುತ್ತ ಅಮಾವಾಸ್ಯೆಯ ದಿವಸ ಸೂರ್ಯ ಚಂದ್ರರಿಗೆ ಪೂರ್ವಾಪರಾಂತರವಿಲ್ಲದೆ ಎರಡೂ ಒಂದೆಡೆಯಲ್ಲೇ ಇರುವಂತೆ ಕಾಣುವುದರಿಂದ ಅಂದು ನಮಗೆ ಚಂದ್ರದರ್ಶನವಿಲ್ಲ. ಹೀಗೆ ಪ್ರಥಮೆಯಿಂದ ಪೂರ್ಣಿಮಾಂತ್ಯದ ತನಕದ ಚಂದ್ರನ ಶೌಕ್ಲ್ಯವೃದ್ಧಿಕಾಲವನ್ನು ಶುಕ್ಲಪಕ್ಷವೆಂದೂ ಪೂರ್ಣಿಮೆಯ ಮರುದಿವಸದ ಪ್ರಥಮಾ ತಿಥಿಯಿಂದ ಅಮಾವಾಸ್ಯಾಂತದ ತನಕದ ಚಂದ್ರನ ಶೌಕಕ್ಲ್ಯ ಕ್ಷಯಕಾಲವನ್ನು ಕೃಷ್ಣಪಕ್ಷವೆಂದೂ ಕರೆಯುತ್ತಾರೆ. ಒಂದು ಪಕ್ಷದಲ್ಲಿ ಹದಿಮೂರರಿಂದ ಹದಿನಾರರರ ತನಕವೂ ದಿವಸಗಳಿರುತ್ತವೆ. ಹದಿಮೂರು ದಿವಸಗಳಿರುವ ಪಕ್ಷಕ್ಕೆ ಕ್ಷಯಪಕ್ಷವೆಂದು ಹೆಸರು.

ಚಾಂದ್ರಮಾಸದಲ್ಲಿ ಒಟ್ಟು 30 ತಿಥಿಗಳಿರುತ್ತವೆ. ಪ್ರಥಮೆ ದ್ವಿತೀಯೆ ತೃತೀಯೆ ಚತುರ್ಥಿ ಪಂಚಮಿ ಷಷ್ಠಿ ಸಪ್ತಮಿ ಅಷ್ಟಮಿ ನವಮಿ ದಶಮಿ ಏಕಾದಶಿ ದ್ವಾದಶಿ ತ್ರಯೋದಶಿ ಚತುರ್ದಶಿಯ ಈ ಹದಿನಾಲ್ಕು ತಿಥಿಗಳು ಶುಕ್ಲ ಪಕ್ಷದಲ್ಲಿ ಒಮ್ಮೆಯೂ ಕೃಷ್ಣಪಕ್ಷದಲ್ಲಿ ಒಮ್ಮೆಯೂ ಬರುತ್ತವೆ. ಚತುರ್ದಶಿಯಾದ ಬಳಿಕ ಶುಕ್ಲಪಕ್ಷದಲ್ಲಿ ಪೂರ್ಣಿಮೆಯೂ ಕೃಷ್ಣಪಕ್ಷದಲ್ಲಿ ಅಮಾವಾಸ್ಯೆಯೂ ಬರುತ್ತವೆ.

	ಚಂದ್ರಕಲಾರೂಪವಾದ ಶೌಕ್ಲ್ಯವೃದ್ಧಿಕ್ಷಯಗಳು ಸೂರ್ಯಚಂದ್ರರ ಪೂರ್ವಾಪರಾಂತರದಿಂದ ಸಂಭವಿಸುತ್ತವೆ. ಈ ಅಂತರ ಶೂನ್ಯವಾದಾಗ ಶುಕ್ಲಪ್ರಥಮಾ ತಿಥಿ ಪ್ರಾರಂಭವಾಗಿ ಹನ್ನೆರಡು ಅಂಶಗಳಿಗೆ ಒಂದೊಂದು ತಿಥಿಯಂತೆ ಅಂತರ ಹೆಚ್ಚಾಗುತ್ತ ಹೋದಂತೆಲ್ಲ ಅನುಕ್ರಮವಾಗಿ ದ್ವಿತೀಯಾದಿ ತಿಥಿಗಳು ಬರುತ್ತವೆ. ಅಂತರ 108 ಅಂಶಗಳಾದಾಗ ಹುಣ್ಣಿಮೆ ಮುಗಿದು 16ನೆಯ ತಿಥಿ (ಕೃಷ್ಣಪ್ರಥಮೆ) ಪ್ರಾರಂಭವಾಗಿ ಅಂತರ 360 ಅಂಶಗಳಾದಾಗ ಎಂದರೆ ಪೂರ್ವಾಪರಾಂತರ ಶೂನ್ಯವಾದಾಗ ಅಮಾವಾಸ್ಯೆ ಮುಗಿದು ಮುಂದೆ ಪ್ರಥಮೆ ಪ್ರಾರಂಭವಾಗುತ್ತದೆ.

ಸರಾಸರಿಮಾನದಿಂದ ತಿಥಿಯ ಪ್ರಮಾಣ 60 ಘಳಿಗೆ ಕಾಲ (24 ಗಂಟೆಗಳು). ಸೂರ್ಯಚಂದ್ರರ ಗತಿಯ ವ್ಯತ್ಯಾಸದಿಂದ ತಿಥಿಯ ಕಾಲಪರಿಮಾಣ ಹೆಚ್ಚಾಗಲೂಬಹುದು ಕಡಿಮೆಯಾಗಲೂಬಹುದು. 60 ಘಳಿಗೆ ಇರುವ ತಿಥಿಯನ್ನು ಖರ್ವತಿಥಿ, 60 ಘಳಿಗೆಗಳಿಗಿಂತ ಕಡಿಮೆ ಇರುವುದನ್ನು ಹಿಂಸ್ರತಿಥಿ, ಮತ್ತು 60 ಘಳಿಗೆಗಳಿಗಿಂತ ಹೆಚ್ಚು ಇರುವುದನ್ನು ದರ್ಪತಿಥಿ ಎಂದು ಶಾಸ್ತ್ರಕಾರರು ಕರೆದಿದ್ದಾರೆ. ಈ ತಿಥಿಗಳು ಸೂರ್ಯೋದಯದಿಂದ ಎಷ್ಟು ಘಳಿಗೆಗಳ ಕಾಲ ಇರುತ್ತವೆ ಎನ್ನುವುದನ್ನು ಗಣಿಸಿ ಪಂಚಾಂಗಗಳಲ್ಲಿ ತಿಳಿಸುತ್ತಾರೆ.

ನಕ್ಷತ್ರ, ಯೋಗ ಮತ್ತು ಕರಣಗಳ ವಿವರಣೆಯನ್ನು ಈ ಮೊದಲೇ ಹೇಳಿದೆ. ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಎಂಬ ಐದು ಮುಖ್ಯವಾದ ಅಂಗಗಳ ವಿವರವನ್ನು ಅಲ್ಲದೆ ಗ್ರಹಗಳ ಸ್ಥಿತಿಯನ್ನೂ ಪೈತೃಕ ಕರ್ಮಕ್ಕೆ ಆವಶ್ಯಕವಾದ ತಿಥಿಗಳು ಸಂಕ್ರಮಣಪುಣ್ಯಕಾಲಗಳು ಅಮಾವಾಸ್ಯೆ ಪೂರ್ಣಿಮಾ ಇಷ್ಟಿಕಾಲಗಳು ಪ್ರದೋಷ, ಏಕಾದಶಿ, ಉಪಾಕರ್ಮ, ಜನ್ಮಾಷ್ಟಮಿ, ನವರಾತ್ರಿ, ದೀಪಾವಳಿ, ಗೌರೀವ್ರತ ಮೊದಲಾದ ಕರ್ಮಗಳನ್ನು ಆಚರಿಸತಕ್ಕ ದಿವಸಗಳನ್ನೂ ಪಂಚಾಂಗ ತಿಳಿಸುತ್ತದೆ.
ಇಷ್ಟಲ್ಲದೆ ಪಂಚಾಂಗದ ಆರಂಭದಲ್ಲಿ ಆಯಾ ವರ್ಷದ ನವನಾಯಕರುಗಳ ವಿವರ ಮತ್ತು ಫಲ, ಗುರುಶುಕ್ರರ ಉದಯಾಸ್ತಫಲ, ಗ್ರಹಗಳ ಚಾರಫಲ, ಪ್ರತಿಯೊಂದು ರಾಶಿಯ ಆದಾಯ ವ್ಯಯಗಳು, ನಕ್ಷತ್ರಗಳ ಕಂದಾಯಫಲ, ಗ್ರಹಣ ವಿಚಾರ, ಮಳೆಯ ವಿಚಾರ ಇತ್ಯಾದಿ ವಿವರಗಳಿರುವುವು. ಈ ಫಲಗಳನ್ನು ಚೈತ್ರ ಶುಕ್ಲಪ್ರಥಮೆಯ ದಿವಸ ಪಠನ ಮಾಡುವುದರಿಂದ ಅಥವಾ ಕೇಳುವುದರಿಂದ ಕಷ್ಟಗಳು ಹೋಗಿ ಸೌಖ್ಯವೂ ಆಯುರ್ವೃದ್ಧಿಯೂ ಯಶಸ್ಸೂ ಅರ್ಥಲಾಭವೂ ಆ ವರ್ಷದಲ್ಲಿ ಉಂಟಾಗುತ್ತವೆ ಎಂಬುದನ್ನು ಜನ ನಂಬಿದ್ದಾರೆ. ಕರ್ಮಶ್ರದ್ಧಾಳುಗಳಾದ ಹಿಂದುಗಳಿಗೆ ಪಂಚಾಂಗ ನಿತ್ಯಬಳಕೆಯ ಒಂದು ಕೈಗನ್ನಡಿ.
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ